ಕಾಂಗ್ರೆಸ್​ಗೆ​ ನೆಹರೂ ಕಾಲದಿಂದಲೂ ಸಂವಿಧಾನ ಬದಲಿಸುವ ಚಟ; ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ

Sampriya

ಶನಿವಾರ, 14 ಡಿಸೆಂಬರ್ 2024 (19:22 IST)
Photo Courtesy X
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಭಾರತದ ಸಂವಿಧಾನದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನೆಹರೂ ಕಾಲದಿಂದಲೂ ಕಾಂಗ್ರೆಸ್​ಗೆ​ ಸಂವಿಧಾನ ಬದಲಿಸುವ ಚಟ ಮುಂದುವರಿದಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ಮಾತನಾಡಿ, ಭಾರತವು ಕೇವಲ ದೊಡ್ಡ ಪ್ರಜಾಪ್ರಭುತ್ವವಲ್ಲ. ಅದು ಸಾವಿರಾರು ವರ್ಷಗಳ ಪ್ರಜಾಪ್ರಭುತ್ವ ಸಂಪ್ರದಾಯಗಳಿಂದಾಗಿ ಪ್ರಜಾಪ್ರಭುತ್ವದ ತಾಯಿ ಎಂದು ಮೋದಿ ಬಣ್ಣಿಸಿದ್ದಾರೆ.   ನಮ್ಮ ದೇಶದ ಎಲ್ಲಾ ನಾಗರಿಕರಿಗೆ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನರಿಗೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ಮುಂದುವರಿಸಿದರು.

ಇದಕ್ಕೂ ಮೊದಲು ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಸದನವನ್ನು ಉದ್ದೇಶಿಸಿ ಮಾತನಾಡಿ ಮೋಇ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಅದಕ್ಕೆ ಮೋದಿ ತಿರುಗೇಟು ನೀಡಿದರು.

75 ವರ್ಷಗಳ ಸುದೀರ್ಘ ಪ್ರಯಾಣವು ಸ್ಮರಣೀಯವಾಗಿದೆ. ಆದರೆ, ನಮ್ಮ ಸಂವಿಧಾನವು 25 ವರ್ಷಗಳನ್ನು ಪೂರೈಸಿದಾಗ ಪ್ರಜಾಪ್ರಭುತ್ವವನ್ನು ನಾಶಪಡಿಸಲಾಯಿತು. ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಿತ್ತೊಗೆಯಲಾಯಿತು, ಇಡೀ ದೇಶವನ್ನು ಜೈಲಾಗಿ ಪರಿವರ್ತಿಸಲಾಯಿತು. ಈ ಪಾಪವನ್ನು ತೊಳೆಯಲು ಸಾಧ್ಯವೇ ಇಲ್ಲ. ಕಾಂಗ್ರೆಸ್​ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿತ್ತು ಎಂದು ಪ್ರಧಾನಿ ಮೋದಿ ಟೀಕಿಸಿದರು.

ಸಂವಿಧಾನವನ್ನು ಬದಲಿಸುವಲ್ಲಿ ದೇಶದ ಮೊದಲ ಪ್ರಧಾನಿ ನೆಹರು ಬಿತ್ತಿದ ಬೀಜಕ್ಕೆ ಇಂದಿರಾ ಗಾಂಧಿ ನೀರೆರೆದರು. ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್​ ನಿರ್ಧಾರವನ್ನೇ ರದ್ದುಗೊಳಿಸಿದರು ಎಂದು ಟೀಕಿಸಿದ್ದಾರೆ.

ಸಂವಿಧಾನವನ್ನು ಆರು ದಶಕಗಳಲ್ಲಿ 75 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಪದ್ಧತಿಯ ಬೀಜಗಳನ್ನು ಮೊದಲ ಪ್ರಧಾನಿ ನೆಹರೂ ಬಿತ್ತಿದರು. ಇಂದಿರಾ ಗಾಂಧಿ ಅದನ್ನು ಪೋಷಿಸಿದರು. ಸುಪ್ರೀಂ ಕೋರ್ಟ್​ನ 1971 ರ ತೀರ್ಪನ್ನು ನಿರ್ಲಕ್ಷಿಸಿ, ಅವರು ನ್ಯಾಯಾಂಗದ ಅಧಿಕಾರವನ್ನು ಕುಗ್ಗಿಸಲು ಸಂವಿಧಾನವನ್ನು ಬದಲಾಯಿಸಿದರು. ಅಂದಿನಿಂದಲೂ ಕಾಂಗ್ರೆಸ್‌ಗೆ ಸಂವಿಧಾನ ಬದಲಿಸುವ ಚಟ ಮುಂದುವರೆದಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆದರೆ, ಒಂದೇ ಕುಟುಂಬ 55 ವರ್ಷಗಳ ಕಾಲ ಆಡಳಿತ ನಡೆಸಿದೆ. ಈ  ರಾಜವಂಶದ ರಾಜಕೀಯ ಭಾರತದ ಸಂವಿಧಾನಕ್ಕೆ ಧಕ್ಕೆ ತಂದಿದೆ. ನಾನು ಯಾರನ್ನೂ ವೈಯಕ್ತಿಕವಾಗಿ ನಿಂದಿಸಲು ಬಂದಿಲ್ಲ. ಆದರೆ, ಸತ್ಯವನ್ನು ರಾಷ್ಟ್ರದ ಮುಂದೆ ಇಡಬೇಕು ಎಂದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ