ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ, ಪ್ರೊಫೆಸರ್‌ ಯಶ್‌ ಪಾಲ್‌ ವಿಧಿವಶ

ಮಂಗಳವಾರ, 25 ಜುಲೈ 2017 (11:44 IST)
ನೊಯ್ಡಾ: ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ, ಪದ್ಮ ವಿಭೂಷಣ ಪುರಸ್ಕೃತ ಪ್ರೊಫೆಸರ್‌ ಯಶ್‌ ಪಾಲ್‌ ಅವರು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
 
ಹಲವು ವರ್ಷಗಳಿಂದ ವಯೋ ಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ಪ್ರೊಫೆಸರ್ ಯಶ್ ಪಾಲ್ ಸಿಂಗ್ ಅವರು, ನಿನ್ನೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 1926 ನವೆಂಬರ್ 26ರಂದು ಬ್ರಿಟೀಷ್ ಇಂಡಿಯಾದ ಜಂಗ್ ನಲ್ಲಿ ಜನಿಸಿದ ಯಶ್ ಪಾಲ್ ಸಿಂಗ್ ಅವರು, ಕಾಸ್ಮಿಕ್ ಕಿರಣಗಳ ಕುರಿತು ಸಂಶೋಧನೆ ಮಾಡಿ ಖ್ಯಾತಿ ಗಳಿಸಿದ್ದರು. ತಮ್ಮ ವೃತ್ತಿ ಜೀವನದಲ್ಲಿ ದೇಶಕ್ಕೆ ಸಾಕಷ್ಟು ಸೇವೆಸಲ್ಲಿಸಿರುವ ಯಶ್ ಪಾಲ್ ಸಿಂಗ್ ಅವರ ಸಾಧನೆಯನ್ನು ಗಮನಿಸಿ  2013ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
 
1976ರಲ್ಲೇ ಯಶ್ ಪಾಲ್ ಸಿಂಗ್ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸೇವೆಗಾಗಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 1980ರಲ್ಲಿ ಮಾರ್ಕೋನಿ ಫೆಲೋ, 2011ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು. ಟಾಟಾ ಇನ್ ಸ್ಟಿಟ್ಯೂಟ್ ಆಪ್ ಫಂಡಮೆಂಟಲ್ ರೀಸರ್ಚ್ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಯಶ್ ಪಾಲ್ ಸಿಂಗ್ ಅವರು, ಬಳಿಕ 1986ರಿಂದ 1991ರವರೆಗೂ ಯುಜಿಸಿಯಲ್ಲಿಯೂ ಸೇವೆ ಸಲ್ಲಿಸಿದ್ದರು.
 

ವೆಬ್ದುನಿಯಾವನ್ನು ಓದಿ