ಸಿರಿಯಾದ ಇರಾನ್ ರಾಯಭಾರ ಕಚೇರಿಗೆ ಇಸ್ರೇಲ್‌ ದಾಳಿ: 11 ಮಂದಿ ದಾರುಣ ಸಾವು

Sampriya

ಮಂಗಳವಾರ, 2 ಏಪ್ರಿಲ್ 2024 (14:54 IST)
Photo Courtesy X
ಟೆಹರಾನ್: ಡಮಾಸ್ಕಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಇರಾನ್ ದೇಶದ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಹಿರಿಯ ಅಧಿಕಾರಿಗಳು ಸೇರಿ 11 ದಾರುಣವಾಗಿ ಸಾವನ್ನಪ್ಪಿದ್ದಾರೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಇನ್ನೊಬ್ಬ ಉನ್ನತ ಶ್ರೇಣಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ ರಹೀಮಿ ಹಾಗೂ 7 ಮಂದಿ ಸದಸ್ಯರು ಹತ್ಯೆಯಾದವರಲ್ಲಿ ಸೇರಿದ್ದಾರೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಸೋಮವಾರ ನಡೆದ ದಾಳಿಯಿಂದ ಸಂಪೂರ್ಣ ಕಟ್ಟಡ ನಾಶವಾಗಿದೆ. ಒಳಗಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರತೆಗೆಯುವ ಹಾಗೂ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಮೃತರಲ್ಲಿ 8 ಮಂದಿ ಇರಾನಿಯನ್ನರು, ಇಬ್ಬರು ಸಿರಿಯನ್ನರು ಹಾಗೂ ಓರ್ವ ಲೆಬನೀಸ್ ಸೇರಿದ್ದಾರೆ. ಇವರೆಲ್ಲರೂ ಹೋರಾಟಗಾರರು. ನಾಗರಿಕರು ಯಾರೂ ಮೃತಪಟ್ಟಿಲ್ಲ ಎಂದು ಸಿರಿಯಾದಲ್ಲಿನ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ