ನವದೆಹಲಿ: ದೆಹಲಿ ವಿಧಾನಸಭೆಯ ಚುನಾವಣೆ ಕಾವೇರುತ್ತಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದೆ. ಫೆಬ್ರುವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಇದೀಗ ಚುನಾವಣಾ ಆಖಾಢ ರಂಗೇರುತ್ತಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಧ್ಯಮ ವರ್ಗದವರಿಗಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಆಮ್ ಆದ್ಮಿ ಪಕ್ಷವು (ಎಎಪಿ) ದೆಹಲಿಯಲ್ಲಿ ನೆಲೆ ಕಳೆದುಕೊಳ್ಳುತ್ತಿರುವುದರಿಂದ ಇಂತಹ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ ಅಧಿವೇಶನವು, ಜನವರಿ 31ರಿಂದ ಏಪ್ರಿಲ್ 4ರ ವರೆಗೆ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್ ಮಂಡಿಸಲಿದ್ದಾರೆ. ಏತನ್ಮಧ್ಯೆ, ದೆಹಲಿ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದು, ಮಧ್ಯಮ ವರ್ಗದ ಜನರಿಗಾಗಿ ಕೆಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಿದ್ದಾರೆ ಕೇಜ್ರಿವಾಲ್. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ರದ್ದು, ಆದಾಯ ತೆರಿಗೆ ಮಿತಿ ಏರಿಕೆ ಸೇರಿದಂತೆ 7 ಅಂಶಗಳು ಅವರ ಬೇಡಿಕೆ ಪಟ್ಟಿಯಲ್ಲಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಕೇಜ್ರಿವಾಲ್ ಅವರ ಪಕ್ಷವು ದೆಹಲಿಯಲ್ಲಿ ನೆಲೆ ಕಳೆದುಕೊಳ್ಳುತ್ತಿದೆ. ಹಾಗಾಗಿ, ಸಾಮಾನ್ಯ ಪ್ರಣಾಳಿಕೆ ಬಿಡುಗಡೆಯ ನಂತರವೂ, ನಿಯಮಿತವಾಗಿ ಇಂತಹ ಘೋಷಣೆಗಳನ್ನು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.