ಮೋದಿಯಿಂದಾಗಿ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಿದ್ದಾರೆ: ಜೈರಾಮ್ ರಮೇಶ್

Krishnaveni K

ಶನಿವಾರ, 4 ಜನವರಿ 2025 (15:12 IST)
ನವದೆಹಲಿ: ಪ್ರಧಾನಿ ಮೋದಿಯವರ ದುರಾಡಳಿತದಿಂದಾಗಿ ದೇಶದಲ್ಲಿ ಮಹಿಳೆಯರು ಮಂಗಳಸೂತ್ರವನ್ನು ಅಡವಿಟ್ಟು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಕುಟುಂಬಗಳ ಸುಮಾರು 3 ಲಕ್ಷ ಕೋಟಿ ಚಿನ್ನದ ಮೇಲಿನ ಸಾಲ ಬಾಕಿ ಉಳಿದಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಜೈರಾಂ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ಮಂಗಳಸೂತ್ರ ಕಸಿದುಕೊಳ್ಳುತ್ತಾರೆ ಎಂಬ ಕಾಲ್ಪನಿಕ ಕತೆ ಹರಿಯಬಿಟ್ಟು ಅತಿಮಾನುಷ ಪ್ರಧಾನಿಯೊಬ್ಬರು ಮಹಿಳೆಯರನ್ನು ಬೆದರಿಸುತ್ತಿದ್ದಾಗ, ಚಿನ್ನದ ಅಡಮಾನ ಸಾಲ ಪಡೆಯುವ ಪ್ರವೃತ್ತಿ ನಿಮ್ಮ ಅವಧಿಯಲ್ಲೇ ವಿಪರೀತವಾಗುತ್ತಿದೆ. ಭಾರತೀಯ ಕುಟುಂಬಗಳು ಪಡೆದಿರುವ ಸುಮಾರು 3 ಲಕ್ಷ ಕೋಟಿ ಚಿನ್ನದ ಮೇಲಿನ ಸಾಲ ಬಾಕಿ ಉಳಿದಿದೆ. ಹೆಚ್ಚುತ್ತಿರುವ ಸಾಲ, ಕುಸಿಯುತ್ತಿರುವ ಆರ್ಥಿಕತೆಯಿಂದಾಗಿ ಈ ಸಾಲ ತೀರಿಸಲಾಗುತ್ತಿಲ್ಲ.

ಜನರು ಶೇ.30 ರಷ್ಟು ಪ್ರಕರಣಗಳಲ್ಲಿ ಚಿನ್ನ ಅಡವಿಟ್ಟು ಪಡೆದ ಸಾಲ ತೀರಿಸಲಾಗುತ್ತಿಲ್ಲ. ಹೀಗಾಗಿ ಮಂಗಳ ಸೂತ್ರ ಮತ್ತಿತರ ಆಭರಣಗಳನ್ನು ಮಹಿಳೆಯರು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಮೋದಿ ಸರ್ಕಾರದ ಕೆಲವರಿಗಷ್ಟೇ ಸೀಮಿತವಾದ ನಿಯಮ, ಅಸ್ಪಷ್ಟ ನೀತಿಗಳು ಕಾರಣ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮಹಿಳೆಯರಿಂದ ಮಂಗಳಸೂತ್ರ ಕಸಿದುಕೊಳ್ಳುತ್ತಿರುವ ಏಕೈಕ ಸರ್ಕಾರವಿದು’ ಎಂದು ಜೈರಾಮ್ ರಮೇಶ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಬಂದರೆ ಮಹಿಳೆಯರು ಮಂಗಳಸೂತ್ರವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬರ್ಥದಲ್ಲಿ ವಾಗ್ದಾಳಿ ನಡೆಸಿದ್ದರು. ಅದನ್ನಿಟ್ಟುಕೊಂಡು ಈಗ ಜೈರಾಮ್ ರಮೇಶ್ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ