ಜೆಎನ್‌ಯು ವಸತಿ ನೀಲಯದಲ್ಲಿ ವಿದ್ಯಾರ್ಥಿ ಶವ ಪತ್ತೆ

ಬುಧವಾರ, 26 ಅಕ್ಟೋಬರ್ 2016 (11:58 IST)
ಕಳೆದೊಂದು ವರ್ಷದಿಂದ ಪದೇ ಪದೇ ಸುದ್ದಿಯಾಗುತ್ತಿರುವ ನವದೆಹಲಿಯ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೊಬ್ಬ  ಪಿಹೆಚ್‌ಡಿ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮಂಗಳವಾರ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. 

 
ಮೃತ ವಿದ್ಯಾರ್ಥಿ ಮಣಿಪುರ ಮೂಲದ ಜೆ. ಆರ್. ಫಿಲೆಮನ್ ರಾಜ್ ಕಳೆದ 3 ದಿನಗಳಿಂದ ಕಾಣಿಸುತ್ತಿರಲಿಲ್ಲ. ಆತನ ಕೋಣೆಗೆ ಬೀಗ ಹಾಕಲಾಗಿತ್ತು ಮತ್ತು ಫೋನ್ ಮಾಡಿದರೆ ಅದು ರಿಂಗಾಗುತ್ತಿತ್ತು, ವಿನಃ ಯಾರು ಕೂಡ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಮಂಗಳವಾರ ಸಂಜೆ ಆತನ ಕೋಣೆಯಿಂದ ದುರ್ವಾಸನೆ ಬರತೊಡಗಿದಾಗ ವಿದ್ಯಾರ್ಥಿಗಳು ಬಾಗಿಲು ಒಡೆದು ನೋಡಿದ್ದಾರೆ. ಆಗಷ್ಟೇ ಆತನ ಶವವಾಗಿ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಬಳಿಕ ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದರು. 
 
ಫಿಲೆಮನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಳಿಕವಷ್ಟೇ ಆತನ ಸಾವಿಗೆ ಕಾರಣವೇನೆಂದು ತಿಳಿದು ಬರಲಿದೆ. 
 
ವಿವಿಯ ಇನ್ನೊಬ್ಬ ವಿದ್ಯಾರ್ಥಿ ನಜೀಬ್ ಅಹ್ಮದ್ ಕೂಡ ಕಳೆದ ಅಕ್ಟೋಬರ್ 15 ರಿಂದ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನಜೀಬ್ ಪತ್ತೆ ಮಾಡಿದವರಿಗೆ ಪೊಲೀಸ್ ಇಲಾಖೆ 1 ಲಕ್ಷ ರೂಪಾಯಿಯನ್ನು ಘೋಷಿಸಿದೆ. ಆದರೆ ಆತನ ಸುಳಿವು ಸಿಕ್ಕಿಲ್ಲ. 
 
ಮತ್ತೀಗ ಫೀಲೋಮಿನ್ ನಿಗೂಢ ಸಾವು ಪ್ರತಿಭಟನೆಯ ಕಾವೇರಿಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ