ದೇಶಾದ್ಯಂತ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಸಂಭ್ರಮ

ಶುಕ್ರವಾರ, 22 ಜುಲೈ 2016 (11:33 IST)
ದೇಶದ ಮಹಾನಗರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. 
 
ಕಬಾಲಿ ಟಿಕೆಟ್ ಪಡೆದ ರಜನಿಕಾಂತ್ ಅಭಿಮಾನಿಗಳು ಅದೃಷ್ಠವಂತರು ಎಂದು ಬಿಂಬಿಸಲಾಗುತ್ತಿದೆ. ಚೆನ್ನೈ ಮಹಾನಗರದಲ್ಲಿ ಕಬಾಲಿ ಚಿತ್ರ ಹಬ್ಬದ ಸಂಭ್ರಮದ ವಾತಾವರಣ ಸೃಷ್ಟಿ ಮಾಡಿದೆ.
 
ನಗರದಲ್ಲಿರುವ ಬಹುತೇಕ ಕಂಪೆನಿಗಳು ಇಂದು  ಕಬಾಲಿ ಚಿತ್ರ ವೀಕ್ಷಣೆಗಾಗಿ ರಜೆ ಘೋಷಿಸಿದೆ. ಸಿನೆಮಾ ವೀಕ್ಷಣೆಗಾಗಿ ಕಂಪೆನಿಗಳು ರಜೆ ಘೋಷಿಸಿರುವುದು ಇದು ಮೊದಲ ಬಾರಿಯಾಗಿದೆ.
 
ದೇಶಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾದ ಕಬಾಲಿ ಚಿತ್ರದ ಟಿಕೆಟ್ ಪಡೆಯಲು ಅಭಿಮಾನಿಗಳು ಹರಸಾಹಸ ಪಡುತ್ತಿದ್ದಾರೆ. ಸಾವಿರ ರೂಪಾಯಿಗಳನ್ನು ನೀಡಿದರೂ ಟಿಕೆಟ್ ದೊರೆಯದಿರುವುದು ಕೆಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
 
ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಖ್ಯಾತಿಪಡೆದ ರಜನಿಕಾಂತ್, ಚಿತ್ರದಲ್ಲಿ ತನ್ನ ಕುಟುಂಬ ಮತ್ತು ಉದ್ಯಮವನ್ನು ರಕ್ಷಿಸಲು ವಿರೋಧಿಗಳನ್ನು ಮಟ್ಟಹಾಕುವ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಬಾಲಿ ಚಿತ್ರ, ಕೇವಲ ಮೂರು ದಿನಗಳಲ್ಲಿ 200 ಕೋಟಿ ರೂಪಾಯಿ ಆದಾಯಗಳಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕಬಾಲಿ ಚಿತ್ರ ಸೆಟಿಲೈಟ್ ಹಕ್ಕಗಳಿಂದ 400 ಮಿಲಿಯನ್ ರೂಪಾಯಿಗಳ ಲಾಭ ಗಳಿಸಿದೆ. 
 
ಮಲೇಷ್ಯಾ ಮೂಲದ ಏರ್‌ ಏಷ್ಯಾ ವಿಮಾನ ಕಬಾಲಿ ಚಿತ್ರದ ಆತಿಥ್ಯ ವಹಿಸಿದ್ದು, ಬೆಂಗಳೂರಿನಿಂದ ಚೆನ್ನೈಗೆ ಬಂದು ಕಬಾಲಿ ಚಿತ್ರ ನೋಡುವವರಿಗೆ ಭಾರಿ ರಿಯಾಯಿತಿ ಘೋಷಿಸಿದ್ದಲ್ಲದೇ ಟಿಕೆಟ್ ವ್ಯವಸ್ಥೆ ಕೂಡಾ ಮಾಡಿದೆ.
 
ತಮಿಳು ಹೊರತುಪಡಿಸಿ, ಕಬಾಲಿ ಚಿತ್ರ ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಬಿಡುಗಡೆಯಾಗಿದ್ದು, ಉತ್ತರ ಭಾರತದ 1000 ಧಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ