3000 ಕಾಂಡೋಮ್ ಹುಡುಕುತ್ತಾರೆ, ಒಬ್ಬ ವಿದ್ಯಾರ್ಥಿಯನ್ನು ಹುಡುಕಲಾಗುವುದಿಲ್ಲ

ಮಂಗಳವಾರ, 8 ನವೆಂಬರ್ 2016 (16:08 IST)
ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ಬಿಜೆಪಿ ನೇತೃತ್ವದ ಸರ್ಕಾರ ವಿವಿಯಲ್ಲಿ 3,000 ಕಾಂಡೋಮ್‌ಗಳನ್ನು ಹುಡುಕಲು ಶಕ್ತವಾಗುತ್ತದೆ. ಆದರೆ ಒಂದು ವಿದ್ಯಾರ್ಥಿಯನ್ನು ಹುಡುಕುವಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 
 
ನಾಪತ್ತೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್‌ನನ್ನು ಹುಡುಕಲು ಅಧಿಕಾರಿಗಳು, ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.
 
ರಾಷ್ಟ್ರೀಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ವರದಿಯ ಪ್ರಕಾರ ಕುಮಾರ್, ತಮ್ಮ ಪುಸ್ತಕ 'ಬಿಹಾರದಿಂದ ತಿಹಾರ್' ಬಿಡುಗಡೆ ಸಂದರ್ಭದಲ್ಲಿ ಈ ಮಾತುಗಳನ್ನಾಡಿದ್ದಾರೆ. 
 
ಅವರು ಜೆಎನ್‌ಯುನಲ್ಲಿ ಬಳಕೆಯಾದ ಕಾಂಡೋಮ್‌ಗಳ ಲೆಕ್ಕ ಹಾಕಬಲ್ಲಷ್ಟು ಬುದ್ಧಿವಂತರು. ಆದರೆ ಅದೇ ಬುದ್ಧಿವಂತಿಕೆ ಬಳಸಿ ನಜೀಬ್ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚುವಲ್ಲಿ ಅಸಮರ್ಥರಾಗಿದ್ದಾರೆ ಎಂದು ದೇಶದ್ರೋಹದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಕುಮಾರ್ ಹೇಳಿದ್ದಾರೆ.
 
ಜೆಎನ್‌ಯುನ ಆವರಣದಲ್ಲಿ ವಾಸಿಸುವ ವಿದ್ಯಾರ್ಥಿಗಳಿಂದ ಪ್ರತಿದಿನ 3,000ದಷ್ಟು ಕಾಂಡೋಮ್ ಬಳಕೆಯಾಗುತ್ತದೆ, ಎಂದು ಬಿಜೆಪಿ ಸಂಸದ ಜ್ಞಾನದೇವ್ ಆರೋಪಿಸಿದ್ದರು.
 
ಅಲ್ಲಿ ಪ್ರತಿದಿನ ನೀವು 3,000 ಬಿಯರ್ ಬಾಟಲ್, 2,000 ಭಾರತೀಯ ಮದ್ಯದ ಬಾಟಲಿಗಳು, 2,000 ಚಿಪ್ಸ್ ಕವರ್,10,000 ಸಿಗರೇಟ್ ಬಟ್ಸ್, 4,000ಬೀಡಿ, 50,000 ಎಸುಬಿನ ತುಂಡುಗಳು,500 ಗರ್ಭಪಾತದ ಚುಚ್ಚುಮದ್ದುಗಳನ್ನು ಪತ್ತೆ ಹಚ್ಚಬಹುದು ಎಂದು ಅಹುಜಾ ಹೇಳಿದ್ದರು.
 
ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅಕ್ಟೋಬರ್ 14ರಿಂದ ನಾಪತ್ತೆಯಾಗಿದ್ದು ಆತನ ಪತ್ತೆಗೆ ಆಗ್ರಹಿಸಿ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ