ಚೆನ್ನೈ: ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಅವರು ತಮಿಳುನಾಡು ಕರೂರಿನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ 39 ಜನರ ಪೈಕಿ 35 ಮಂದಿ ಮೃತದೇಹಗಳ ಗುರುತು ಪತ್ತೆಯಾಗಿದೆ.
ಗುರುತು ಪತ್ತೆಯಾದವರಲ್ಲಿ ಕರೂರು ಜಿಲ್ಲೆಯವರು 28 ಜನ, ಈರೋಡ್, ತಿರುಪುರ, ಧಾರಾಪುರಂ ಜಿಲ್ಲೆಗಳ ತಲಾ ಇಬ್ಬರು, ಸೇಲಂ ಜಿಲ್ಲೆಯ ಒಬ್ಬರ ಗುರುತು ಪತ್ತೆಯಾಗಿದೆ. ಉಳಿದ 4 ಶವಗಳನ್ನು ಗುರುತಿಸುವ ಕಾರ್ಯವನ್ನು ಸ್ಥಳೀಯ ಪೊಲೀಸರು ಮಾಡುತ್ತಿದ್ದಾರೆ.
ಕರೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕಾಲ್ತುಳಿತದಲ್ಲಿ ಗಾಯಗೊಂಡ 50 ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೂರಿನ ಖಾಸಗಿ ಆಸ್ಪತ್ರೆಗಳಲ್ಲಿ 61 ಜನರೂ ಸೇರಿ ಒಟ್ಟು 111 ಜನರು ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾರೆ.
10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಹೇಳಿದರು.