ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡುತ್ತಿದೆಯೇ ಕೇರಳ!

ಶುಕ್ರವಾರ, 27 ಆಗಸ್ಟ್ 2021 (07:11 IST)
ಮುಂಬೈ (ಆ,27) : ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ದೇಶದ ಆರ್ಥಿಕ ರಾಜಧಾನಿ ಮಹಾರಾಷ್ಟ್ರಕ್ಕೆ ಕೋವಿಡ್ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಈ ವೇಳೆ ಕನಿಷ್ಟ 60 ಲಕ್ಷ ಜನ ಮಾರಕ ಕೊರೋನಾ ವೈರಸ್ಗೆ ತುತ್ತಾಗಲಿದ್ದಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, "ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದ ವೇಳೆಗೆ ಬಹುತೇಕ ಎಲ್ಲಾ ಹಬ್ಬಗಳು ಮುಗಿಯುವ ಸಮಯವಾಗಿದ್ದು, ಈ ವೇಳೆಗೆ ಹೆಚ್ಚಿನ ಜನ ಕೊರೋನಾ ವೈರಸ್ಗೆ ತುತ್ತಾಗುವ ಸಾಧ್ಯತೆ ಇದೆ" ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರದ ಆರೋಗ್ಯ ಸಚಿವ ರಾಜೇಶ್ ತೋಪೆ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್ ತೋಪೆ, "ಅಕ್ಟೋಬರ್ ಅಂತ್ಯದ ವೇಳೆ ಮಹಾರಾಷ್ಟ್ರದಲ್ಲಿ ಮೂರನೇ ಕೋವಿಡ್ ಅಲೆ ಆರಂಭವಾಗಲಿದ್ದು, ಅಪಾರ ಜನ ಈ ಸೋಂಕಿಗೆ ತುತ್ತಾಗಲಿದ್ದಾರೆ. ಕನಿಷ್ಠ 13 ಲಕ್ಷ ಜನಕ್ಕೆ ಆಮ್ಲಜನಕದ ಅಗತ್ಯತೆ ಬೇಕಾಗಬಹುದು. ಹೀಗಾಗಿ ನಾವು ಈಗಾಗಲೇ ನಮ್ಮ ಆಮ್ಲಜನಕದ ಸಾಮರ್ಥ್ಯವನ್ನು 2000 ಮಿಲಿಯನ್ ಟನ್ಗೆ ಹೆಚ್ಚಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
"ಕೇರಳದ ಓಣಂ ಹಬ್ಬದ ನಂತರ ಕೇರಳ ರಾಜ್ಯವು ದಾಖಲೆಯ ಸೋಂಕುಗಳ ಪ್ರಕರಣವನ್ನು ಎದುರಿಸುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ, ನವರಾತ್ರಿ, ದಸರಾ ಮತ್ತು ದೀಪಾವಳಿಯು ಹಬ್ಬಗಳು ಎದುರಾಗಲಿದ್ದು, ಜನ ದೇಶದ ಮೂಲೆ ಮೂಲೆ ಸಂಚರಿಸುವ ಸಾಧ್ಯತೆ ಇರುತ್ತದೆ. ಈ ವೇಳೆ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವುದರಿಂದ ಮಹಾರಾಷ್ಟ್ರದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಭಾರಿ ಏರಿಕೆಗೆ ಸಾಕ್ಷಿಯಾಗುವ ಆತಂಕವಿದೆ.
ಕಳೆದ ವಾರ ಮಹಾರಾಷ್ಟ್ರವು ಕೋವಿಡ್ -19 ಲಾಕ್ಡೌನ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಿದ್ದು, ಚಿತ್ರಮಂದಿರಗಳು ಮತ್ತು ಧಾರ್ಮಿಕ ಸ್ಥಳಗಳು ಇನ್ನೂ ಮುಚ್ಚಿದೆಯಾದರೂ, ಮಾಲ್ಗಳನ್ನು ತೆರೆಯಲು ಅನುಮತಿಸಲಾಗಿದೆ ಮತ್ತು ಶಾಪಿಂಗ್ ಸಮಯವನ್ನು ಹೆಚ್ಚಿಸಲಾಗಿದೆ. ಮಾರುಕಟ್ಟೆ ಸ್ಥಳಗಳು ಸಹ ಹಬ್ಬದ ಶಾಪರ್ಗಳಿಂದ ಸಡಗರದಿಂದ ಕೂಡಿದೆ. ಆದರೆ, 10 ದಿನಗಳ ಓನಂ ಹಬ್ಬದ ಬೆನ್ನಿಗೆ ಕೇರಳದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಇಡೀ ದೇಶಕ್ಕೆ ದೊಡ್ಡ ಎಚ್ಚರಿಕೆಯ ಘಂಟೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಲಾಕ್ಡೌನ್ ಅನ್ನು ಕಠಿಣಗೊಳಿಸಿ ಎಂದು ತಜ್ಞರು ಎಲ್ಲಾ ರಾಜ್ಯ ಸರ್ಕಾರಗಳನ್ನು ಎಚ್ಚರಿಸಿದ್ದಾರೆ.
ಕೇರಳದಲ್ಲಿ ಮಿತಿಮೀರಿದ ಕೊರೋನಾ
ಕೇರಳದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂತು ಎನ್ನುವಷ್ಟರಲ್ಲಿ ಮತ್ತೆ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ತೋರಿದೆ. ಅಲ್ಲಿನ ಪ್ರಸಿದ್ಧ ಓಣಂ  ಹಬ್ಬ ಮುಗಿದ ಎರಡು ದಿನಗಳ ಬಳಿಕ ಒಂದೇ ದಿನದಲ್ಲಿ 31,445 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ ಕೆಲವು ತಿಂಗಳುಗಳಲ್ಲಿ ದಾಖಲಾದ ಅತ್ಯಧಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಇದಾಗಿದೆ. ಕಳೆದ 24 ಗಂಟೆಯಲ್ಲಿ 215 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1,65,273 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು.
ಇವುಗಳಲ್ಲಿ ಒಟ್ಟು 31,445 ಜನರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಕೇರಳದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ. 19.3 ಕ್ಕೆ ಏರಿಕೆ ಆಗಿದೆ. ಕೇರಳದಲ್ಲಿ ಕೊರೋನಾ ಹೆಮ್ಮಾರಿಯಿಂದ ಒಟ್ಟು 19,972 ಜನರು ಬಲಿಯಾಗಿದ್ದಾರೆ. 20,271 ಜನರು ಈವರೆಗೆ ಚೇತರಿಸಿಕೊಂಡಿದ್ದಾರೆ.
ಆಗಸ್ಟ್ 23 ರಂದು ಓಣಂ ದಿನದಂದು, ಕೇರಳದಲ್ಲಿ 17,106 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದವು ಮತ್ತು 83 ಜನರು ಸಾವನ್ನಪ್ಪಿದ್ದರು. ಹಬ್ಬದ ಮುನ್ನ ರಾಜ್ಯದ ವಿವಿಧ ಭಾಗಗಳಿಂದ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡು ಬಂದಿತ್ತು. ಆ ಸಮಯದಲ್ಲಿ ರಾಜ್ಯದ ಪರೀಕ್ಷಾ ಪಾಸಿಟಿವಿಟಿ ದರ ಶೇಕಡಾ 17.73 ರಷ್ಟಿತ್ತು. ಮಂಗಳವಾರ, ಪರೀಕ್ಷಾ ಪಾಸಿಟಿವಿಟಿ ದರವು ಶೇ. 18.04 ಕ್ಕೆ ಜಿಗಿದಿದೆ. ಇದು ಇತ್ತೀಚಿನ ವಾರಗಳಲ್ಲಿ ಅತ್ಯಧಿಕವಾಗಿದೆ. ಓಣಂ ಹಬ್ಬಕ್ಕೆ ಮುಂಚೆ, ಮಾರುಕಟ್ಟೆಗಳು ಜನರಿಂದ ತುಂಬಿದ್ದವು ಮತ್ತು ಕೋವಿಡ್ -19 ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯು ಅನೇಕ ಘಟನೆಗಳಲ್ಲಿ ವರದಿಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ