ಕಣ್ಣೂರು: ಫೆಂಗಲ್ ಚಂಡಮಾರುತದಿಂದಾಗಿ ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಣ್ಣೂರಿನಲ್ಲಿ ಎರಡು ಕೆಎಸ್ ಆರ್ ಟಿಸಿ ಬಸ್ ಗಳ ನಡುವೆ ನಡೆದ ಭೀಕರ ಅಪಘಾತದ ವಿಡಿಯೋ ವೈರಲ್ ಆಗಿದೆ. ಈ ಅಪಘಾತದಲ್ಲಿ 35 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪೆರವೂರ್ ಎಂಬಲ್ಲಿ ದುರಂತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ರಸ್ತೆ ಒದ್ದೆಯಾಗಿದ್ದು ಗುಡ್ಡ ಗಾಡು ಪ್ರದೇಶದಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚರಿಸುತ್ತಿತ್ತು. ಆದರೆ ಮಳೆಯಿಂದಾಗಿ ಎದುರಿನಿಂದ ಬರುತ್ತಿದ್ದ ವಾಹನ ಅಷ್ಟಾಗಿ ಗೋಚರಿಸುತ್ತಿರಲಿಲ್ಲ. ಇದರಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮಾನಂದವಾಡಿಯಿಂದ ಪಯ್ಯನ್ನೂರಿಗೆ ಒಂದು ಬಸ್ ಸಂಚರಿಸುತ್ತಿದ್ದರೆ ಇನ್ನೊಂದು ಪಯ್ಯನ್ನೂರಿನಿಂದ ಮಾನಂದವಾಡಿಗೆ ಸಂಚರಿಸುತ್ತಿತ್ತು. ಕ್ಷಣಾರ್ಧದಲ್ಲಿ ಅಪಘಾತ ಸಂಭವಿಸಿದೆ. ಸೈಡ್ ಕೊಡುವಷ್ಟೂ ಸ್ಥಳಾವಕಾಶವಿಲ್ಲದಂತಹ ಗುಡ್ಡುಗಾಡು ಪ್ರದೇಶ ಇದಾಗಿತ್ತು. ಕಳಗೆ ಪ್ರಪಾತವಿದ್ದ ಕಾರಣ ಚಾಲಕನಿಗೂ ಯೋಚಿಸುವಷ್ಟೂ ಸಮಯವಿರಲಿಲ್ಲ.
ಇನ್ನೊಂದು ಬದಿಯಲ್ಲಿ ಗುಡ್ಡವಾಗಿದ್ದರಿಂದ ಎರಡೂ ಬಸ್ ಚಾಲಕರಿಗೂ ಬದಿಗೆ ಸರಿಯುವಷ್ಟು ಸ್ಥಳವಿರಲಿಲ್ಲ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಎರಡೂ ಬಸ್ ಗಳು ಭೀಕರವಾಗಿ ಢಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಸಾವು ಸಂಭವಿಸಿಲ್ಲ. ಆದರೆ 35 ಮಂದಿ ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದ ವಿಡಿಯೋ ಇಲ್ಲಿದೆ ನೋಡಿ: