ಅತ್ಯಾಚಾರ ಯತ್ನ ತಡೆದಿದ್ದಕ್ಕೆ ಯುವತಿಯನ್ನು ಸಜೀವವಾಗಿ ದಹಿಸಲು ಯತ್ನಿಸಿದ ಕಾಮುಕರು

ಸೋಮವಾರ, 29 ಆಗಸ್ಟ್ 2016 (21:06 IST)
ಅತ್ಯಾಚಾರವೆಸಗುವ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಮೂವರು ಕಾಮುಕರು 20 ವರ್ಷದ ಹದಿಹರೆಯದ ಯುವತಿಯ ಮೇಲೆ ಸೀಮೆಎಣ್ಣೆ ಸುರಿದು ಸಜೀವವಾಗಿ ದಹಿಸಲು ಯತ್ನಿಸಿದ ಘಟನೆ ವರದಿಯಾಗಿದೆ.
 
ಆರೋಪಿಗಳಾದ ಅಭಿಷೇಕ್, ವಿಜಯ್ ಮತ್ತು ಆತನ ಮತ್ತೊಬ್ಬ ಗೆಳೆಯ ಯುವತಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು ಗಂಭೀರವಾದ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
 
ಆರೋಪಿಗಳು ಪ್ರತಿನಿತ್ಯ ಯುವತಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಮನೆಯವರಿಗೆ ಆರೋಪಿಗಳ ಬಗ್ಗೆ ದೂರಿದ್ದಾಳೆ. 
 
ಯುವತಿಯ ಸಹೋದರ ಆರೋಪಿಗಳಿಗೆ ಎಚ್ಚರಿಕೆ ನೀಡಿದಾಗ ಆಕ್ರೋಶಗೊಂಡ ಮೂವರು ಆರೋಪಿಗಳು ಆತನನ್ನು ಮನಬಂದಂತೆ ಥಳಿಸಿದ್ದಾರೆ. ತಲೆಗೆ ಬಲವಾಗಿ ಹೊಡೆದಿದ್ದರಿಂದ ಸಹೋದರ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಯುವತಿಯ ಕುಟುಂಬದ ಮೂಲಗಳು ತಿಳಿಸಿವೆ.  
 
ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ