ವಾಷಿಂಗ್ಟನ್: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ತನ್ನ ಉದ್ಯೋಗಿಗಳಿಗೆ ಆಫೀಸ್ಗೆ ಮರಳುವಂತೆ ಸೂಚಿಸಿದ್ದು, ಮರಳದೇ ಇದ್ದಲ್ಲಿ ಉದ್ಯೋಗಿಗಳನ್ನು ಕೆಲಸದಿಂದಲೇ ಕಿತ್ತು ಹಾಕುವುದಾಗಿ ಮೆಟಾ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಕೋವಿಡ್ ಬಳಿಕ ಮೆಟಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅನ್ನು ಕೊನೆಗೊಳಿಸಿ ಆಫೀಸ್ಗೆ ಮರಳುವಂತೆ ತಿಳಿಸಿತ್ತು. ಆದರೆ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸವನ್ನು ಮುಂದುವರಿಸಲು ಆದ್ಯತೆ ನೀಡಿದ್ದಾರೆ. ಇದೀಗ ರಿಟರ್ನ್ ಟು ಆಫೀಸ್ ನೀತಿಯ ಮೇಲೆ ಮೆಟಾ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.
ಈ ಬಗ್ಗೆ ಮೆಟಾದ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಲೋರಿ ಗೋಲರ್ ಕಂಪನಿಯಲ್ಲಿ ಆರ್ಟಿಒ ಕುರಿತಾಗಿ ಉದ್ಯೋಗಳಿಗೆ ಇ-ಮೇಲ್ ಕಳುಹಿಸಿದ್ದಾರೆ.
ಹೊಸ ನೀತಿಯಂತೆ ಕಂಪನಿಯ ಉದ್ಯೋಗಿಗಳು ನಿಯೋಜಿಸಲಾದ ಕಚೇರಿಯಿಂದಲೇ ಕೆಲಸ ಮಾಡಬೇಕು ಅಥವಾ ವಾರಕ್ಕೆ ಕನಿಷ್ಠ 3 ದಿನವಾದರೂ ಕಚೇರಿಯಲ್ಲಿ ಹಾಜರಿರಬೇಕು. ಆದರೆ ಈಗಾಗಲೇ ಮನೆಯಿಂದ ಕೆಲಸ ಮಾಡಲು ಅನುಮೋದನೆ ನೀಡಲಾಗಿರುವ ಉದ್ಯೋಗಿಗಳಿಗೆ ಈ ನೀತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.