ನವದೆಹಲಿ : ಮುಂದಿನ ವರ್ಷ ಕೆಂಪು ಕೋಟೆಯಲ್ಲಿ ಸಿಗೋಣ ಎನ್ನುವ ಮೂಲಕ ಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿಯ ಈ ಹೇಳಿಕೆಗಳು ಅವರ ಅಹಂಕಾರವನ್ನು ತೋರಿಸುತ್ತವೆ. ಅವರು ಮುಂದಿನ ವರ್ಷ ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ಖರ್ಗೆ ಕುಟುಕಿದ್ದಾರೆ.
ನಿಮ್ಮನ್ನು ಗೆಲ್ಲಿಸುವುದು ಅಥವಾ ತಿರಸ್ಕರಿಸುವುದು ಮತದಾರರ ಕೈಯಲ್ಲಿದೆ. 2024ರಲ್ಲಿ ಮತ್ತೊಮ್ಮೆ ಧ್ವಜಾರೋಹಣ ಮಾಡುತ್ತೇನೆ ಅಂತ ಈಗಲೇ ಹೇಳುವುದು ದುರಹಂಕಾರ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಣ್ಣಿನ ಸಮಸ್ಯೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಗೈರಾಗಿದ್ದರು. ಅವರಿಗಾಗಿ ಮೀಸಲಿರಿಸಿದ್ದ ಖುರ್ಚಿ ಖಾಲಿ ಇತ್ತು.
ನನಗೆ ಕಣ್ಣಿನ ಸಮಸ್ಯೆಯಿದೆ. ಮುಖ್ಯವಾಗಿ ಶಿಷ್ಟಾಚಾರದ ಪ್ರಕಾರ ಬೆಳಿಗ್ಗೆ 9:20 ಕ್ಕೆ ನನ್ನ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು. ನಂತರ ಕಾಂಗ್ರೆಸ್ ಕಚೇರಿಗೆ ಬಂದು ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು. ಭದ್ರತೆ ತುಂಬಾ ಬಿಗಿಯಾಗಿದ್ದರಿಂದ ನಾನು ಪಕ್ಷದ ಕಚೇರಿಗೂ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಖರ್ಗೆ ಸ್ಪಷ್ಟನೆ ನೀಡಿದ್ದಾರೆ.