ಪಾಕಿಸ್ತಾನದ ಕಲಾವಿದರು ಉಗ್ರರಲ್ಲ ಎಂಬ ಸಲ್ಮಾನ್ ಹೇಳಿಕೆಗೆ ಕಿಡಿಕಾರಿರುವ ವಿಹೆಚ್‌ಪಿ ನಾಯಕಿ ಸಾಧ್ವಿ ಪ್ರಾಚಿ, ಪಾಕ್ ಕಲಾವಿದರು ತಮ್ಮ ಕಲೆಯನ್ನು ತಮ್ಮ ದೇಶದಲ್ಲಿಯೇ ತೋರಿಸಿಕೊಳ್ಳಲಿ. ಈ ಕಲಾವಿದರ ಬಗ್ಗೆ ಸಲ್ಮಾನ್, ಶಾರುಖ್, ಅಮಿರ್ ಖಾನ್ ಸಹಿತ ಇತರ ಯಾರಿಗಾದರೂ ಸಹಾನುಭೂತಿ ಇದ್ದರೆ ಅವರು ಕೂಡ ಪಾಕಿಸ್ತಾನಕ್ಕೆ ಹೋಗಲಿ. ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನದ ಬಗ್ಗೆ ಅನುಕಂಪ ಸಲ್ಲದು ಎಂದು ಗುಡುಗಿದ್ದಾರೆ.
ನೆರೆ ರಾಷ್ಟ್ರದೊಂದಿಗೆ ಶಾಂತಿ, ಸೌಹಾರ್ದತೆಯಿಂದ ಇರಬೇಕು ಎಂಬುದೇನೋ ಸರಿಯಾದುದು. ಆದರೆ ನೆರೆಯ ದೇಶ ಹದ್ದುಮೀರಿ ವರ್ತಿಸಿದರೆ ಅದಕ್ಕೆ ತಕ್ಕ ಪಾಠ ಕಲಿಸಬೇಕಾದುದು ಕೂಡ ಅತ್ಯಗತ್ಯ. ಕೆಲವು ದೆವ್ವಗಳು ಮಾತಿಂದ ಅರ್ಥ ಮಾಡಿಕೊಳ್ಳುವುದಿಲ್ಲ. ಅವುಗಳಿಗೆ ಲತ್ತೆ ಪೆಟ್ಟು ಕೊಡಲೇಬೇಕಾಗುತ್ತದೆ ಎಂದಿದ್ದಾರೆ.
ಪಾಕಿಸ್ತಾನ ಸಮಸ್ಯೆಯ ಜನಕ ಗಾಂಧೀಜಿ ಜವಾಹರಲಾಲ್ ನೆಹರು ಅವರನ್ನು ಪ್ರಧಾನಿಯಾಗಿಸಿ ಅದನ್ನು ಹುಟ್ಟುಹಾಕಿದವರವರು. ಅವರ ಈ ತಪ್ಪಿನಿಂದ ಸಾವಿರಾರು ಸೈನಿಕರು ಹುತಾತ್ಮರಾಗುತ್ತಿದ್ದಾರೆ. ನನ್ನ ಆದರ್ಶ ಗಾಂಧಿ ಅಲ್ಲ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಎಂದಿದ್ದಾರೆ ಸಾಧ್ವಿ.