ಬೆಂಗಳೂರು: ರಾಜ್ಯದ 1 ಲಕ್ಷದ 17 ಸಾವಿರ ನೌಕರರಿಗೆ ಕಳೆದ 3 ತಿಂಗಳಿನಿಂದ ಸಂಬಳವೇ ಆಗಿಲ್ಲ. ಹೀಗಿರುವಾಗ ರಾಜ್ಯದ ಆರ್ಥಿಕತೆ ಚೆನ್ನಾಗಿದೆ ಎಂದು ಬೊಗಳೆ ಬಿಡುವುದೆಲ್ಲಾ ಬೇಕಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
1 ಲಕ್ಷಕ್ಕೂ ಅಧಿಕ ನೌಕರರಿಗೆ ವೇತನವಾಗದೇ ಇರುವ ವರದಿಯನ್ನು ಉಲ್ಲೇಖಿಸಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿವಾಳಿ ಕಾಂಗ್ರೆಸ್ ಸರ್ಕಾರದ ಬಳಿ ಸರ್ಕಾರ ಸಿಬ್ಬಂದಿಗೆ ಸಂಬಳ ಕೊಡಲೂ ದುಡ್ಡಿಲ್ಲ!
ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿ ಆಗಿದ್ದರೂ, ಸರ್ಕಾರದ ಖಜಾನೆ ಖಾಲಿ ಆಗಿ ಪಾಪರ್ ಆಗಿದ್ದರೂ ಎಲ್ಲವೂ ಚೆನ್ನಾಗಿದೆ ಎಂದು ಬೊಗಳೆ ಬಿಟ್ಟುಕೊಂಡು ಓಡಾಡುತ್ತಿರುವ ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಎಲ್ಲವೂ ಸರಿ ಇದ್ದಿದ್ದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ಒಟ್ಟು 1,17,884 ರಾಜ್ಯ ಸರ್ಕಾರಿ ನೌಕರರಿಗೆ ಕಳೆದ ಮೂರು ತಿಂಗಳಿಂದ 834.9 ಕೋಟಿ ಮೊತ್ತದ ಸಂಬಳ ಕೊಟ್ಟಿಲ್ಲವಲ್ಲ ಯಾಕೆ? ಇನ್ನೆಷ್ಟು ದಿನ ಸ್ವಾಮಿ ಈ ಸುಳ್ಳು, ಭಂಡತನದ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಟೀಕಿಸಿದ್ದಾರೆ.