Kolkata: ಆರ್ ಜಿ ಕರ್ ಆಸ್ಪತ್ರೆ ಟ್ರೈನಿ ವೈದ್ಯೆ ರೇಪ್ ಕೇಸ್: ಆರೋಪಿ ಸಂಜಯ್ ರಾಯ್ ಗೆ ಜೀವಾವಧಿ

Krishnaveni K

ಸೋಮವಾರ, 20 ಜನವರಿ 2025 (15:41 IST)
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಆರೋಪಿ ಸಂಜಯ್ ರಾಯ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ಆಗಸ್ಟ್ 9 ರಂದು ಘಟನೆ ನಡೆದಿತ್ತು. ಆರ್ ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಯಲ್ಲಿ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಸಂಜಯ್ ರಾಯ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ಸಿಬಿಐ ಪ್ರಕರಣದ ತನಿಖೆ ನಡೆಸಿತ್ತು.

ಇದೀಗ ಕೆಳ ಹಂತದ ಕೋರ್ಟ್ ವಿಚಾರಣೆ ನಡೆಸಿ ಕೋರ್ಟ್ ಸಂಜಯ್ ರಾಯ್ ನೇ ಅಪರಾಧಿ ಎಂದು ಶುಕ್ರವಾರ ತೀರ್ಪು ನೀಡಿತ್ತು. ಇಂದು ಶಿಕ್ಷೆಯ ಪ್ರಮಾಣ ಘೋಷಿಸಲಾಗಿದೆ. ಅದರಂತೆ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ವೈದ್ಯೆ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.

ಶಿಕ್ಷೆಯ ಬಗ್ಗೆ ಏನಾದರೂ ಹೇಳಲು ಇದೆಯೇ ಎಂದು ನ್ಯಾಯಾಧೀಶರು ಆರೋಪಿ ಸಂಜಯ್ ರಾಯ್ ನನ್ನು ಕೇಳಿದ್ದು, ನಾನು ತಪ್ಪಿತಸ್ಥನಲ್ಲ, ನನ್ನನ್ನು ಸಿಲುಕಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ