ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ಅಪಾಯಕಾರಿ : ಮನೀಶ್ ಸಿಸೋಡಿಯಾ
ಶನಿವಾರ, 8 ಏಪ್ರಿಲ್ 2023 (12:28 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೇಶದ ಜನರನ್ನುದ್ದೇಶಿಸಿ ಪತ್ರ ಬರೆದಿದ್ದಾರೆ.
ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸಿಸೋಡಿಯಾ ತಿಹಾರ್ ಜೈಲಿನಿಂದಲೇ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಬಗ್ಗೆ ಸವಾಲೆಸೆದಿರುವ ಸಿಸೋಡಿಯಾ ದೇಶದ ಪ್ರಗತಿಗೆ ವಿದ್ಯಾವಂತ ಪ್ರಧಾನಿ ಅಗತ್ಯ ಎಂದು ಹೇಳಿದ್ದಾರೆ.
ಈ ಪತ್ರವನ್ನು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ತಿಳಿಸಿರುವ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ದೇಶದ ಜನತೆಗೆ ಜೈಲಿನಿಂದ ಪತ್ರ ಬರೆದಿದ್ದಾರೆ. ಪ್ರಧಾನಿಯ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ತುಂಬಾ ಅಪಾಯಕಾರಿ. ಮೋದಿ ಅವರಿಗೆ ವಿಜ್ಞಾನ ಅರ್ಥವಾಗಲ್ಲ.
ಅವರಿಗೆ ಶಿಕ್ಷಣದ ಮಹತ್ವವೇ ಅರ್ಥವಾಗಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 60,000 ಶಾಲೆಗಳು ಮುಚ್ಚಲ್ಪಟ್ಟಿವೆ. ಭಾರತದ ಪ್ರಗತಿಗೆ ಒಬ್ಬ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.