1,590 ರೂ. ಮೊಬೈಲ್ EMI ಪಾವತಿಸಿ 1 ಕೋಟಿ ರೂ. ಗೆದ್ದ ವಿದ್ಯಾರ್ಥಿನಿ
ಶನಿವಾರ, 15 ಏಪ್ರಿಲ್ 2017 (11:03 IST)
ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಲಕ್ಕಿ ಗ್ರಾಹಕ್ ಯೋಜನೆಯ ಲಕ್ಕಿ ಡ್ರಾನಲ್ಲಿ ಮಹಾರಾಷ್ಟ್ರದ ಲಾತೂರ್`ನ ವಿದ್ಯಾರ್ಥಿನಿ ಕೋಟಿ ಗೆದ್ದಿದ್ದಾರೆ. ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಓದುತ್ತಿರುವ ಶ್ರದ್ಧಾ ಮೋಹನ್ ಮೆಂಗ್ ಶೆಟ್ಟೆ ನಿನ್ನೆಯ ಲಕ್ಕಿ ಡ್ರಾನಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾರೆ.
ಶ್ರದ್ದಾ ತಮ್ಮ ರೂಪೇ ಕಾರ್ಡ್ ಮೂಲಕ ಹೊಸ ಮೊಬೈಲ್ ಫೋನ್ ಇಎಂಐ ವಹಿವಾಟು 1590 ರೂ, ಪಾವತಿಸಿದ್ದರು. ಈ ವಹಿವಾಟೇ ಶ್ರದ್ಧಾಳನ್ನ ಕೋಟ್ಯಾಧೀಶೆಯನ್ನಾಗಿ ಮಾಡಿದೆ.
ಗುಜರಾತಿನ ಖಾಂಭಟ್`ನ ಪ್ರಾಥಮಿಕ ಶಾಲೆ ಶಿಕ್ಷಕ ಹಾರ್ದಿಕ್ ಕುಮಾರ್, 2ನೇ ಬಹುಮಾನ 50 ಲಕ್ಷ ರೂಪಾಯಿ ಗೆದ್ದಿದ್ಧಾರೆ. ಕೇವಲ 100 ರೂ. ವಹಿವಾಟು ನಡೆಸಿದ್ದ ಉತ್ತರಾಖಂಡ್`ನ ಶೇರ್ ಪುರ್ ಹಳ್ಳಿಯ ಭರತ್ ಸಿಂಗ್ 3ನೇ ಬಹುಮಾನ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಇತ್ತ, ಡಿಜಿ ಧನ್ ಯೋಜನೆಯಡಿ ತಮಿಳುನಾಡಿನ ತಂಬರಮ್ ಜುವೆಲರಿ ಉದ್ಯಮಿ ಪದ್ಮನಾಭನ್ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. 300 ರೂ. ಪೇಮೆಂಟ್ ಪಡೆದಿದ್ದ ಪದ್ಮನಾಭನ್`ಗೆ ಈ ಅದೃಷ್ಟ ಒಲಿದಿದೆ.
ಥಾಣೆಯ ಬ್ಯೂಟಿ ಪಾರ್ಲರ್ ಮಾಲಿಕರಾದ ರಾಗಿಣಿ ರಾಜೇಂದ್ರ ಉಟ್ಟೇಕರ್ 2 ನೇ ಬಹುಮಾನ 25 ಲಕ್ಷ ರೂ. ಮತ್ತು ತೆಲಂಗಾಣದ ಅಮೀರ್ ಪೇಟೆಯಲ್ಲಿ ಜವಳಿ ಅಂಗಡಿ ಇಟ್ಟಿರುವ ಶೇಖ್ ರಫಿ 12 ಲಕ್ಷ ರೂ. 3ನೇ ಬಹುಮಾನ ಗೆದ್ದಿದ್ದಾರೆ.