ನಾಯಕತ್ವ ಬದಲಾವಣೆ, ಬಿಜೆಪಿಗೆ ಹೊಸ ಭೀತಿ': 26ಕ್ಕಲ್ಲ, ಆ. 6ಕ್ಕೆ ಕ್ಲೈಮ್ಯಾಕ್ಸ್!
ಮಂಗಳವಾರ, 20 ಜುಲೈ 2021 (15:38 IST)
ಬೆಂಗಳೂರು(ಜು.20): ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಸರತ್ತು ತಕ್ಷಣಕ್ಕೆ ಮುಗಿಯುವ ಸಾಧ್ಯತೆ ಕಡಮೆ ಎನ್ನಲಾಗಿದ್ದು, ಬರುವ ಆಗಸ್ಟ್ ಮೊದಲ ವಾರದಲ್ಲಿ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
* ನಾಯಕತ್ವ ಚರ್ಚೆಗೆ ಆಗಸ್ಟಲ್ಲಿ ಕ್ಲೈಮಾಕ್ಸ್?
* 26ರಂದು ಮಹತ್ವದ ಘೋಷಣೆ ಅಸಂಭವ
* ಲಿಂಗಾಯತರ ಅವಕೃಪೆಗೆ ತುತ್ತಾಗುವ ಭೀತಿ
* ಎಚ್ಚರಿಕೆಯಿಂದ ಹೆಜ್ಜೆ ಇಡಲು ಬಿಜೆಪಿ ಚಿಂತನೆ
ಬದಲಾವಣೆ ಬಗ್ಗೆ ಕಳೆದ ಎರಡು ದಿನಗಳಿಂದ ತೀವ್ರ ವದಂತಿಗಳು ಕೇಳಿಬರುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈ ನಡುವೆ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಮಠಾಧೀಶರು ಬಹಿರಂಗವಾಗಿ ಯಡಿಯೂರಪ್ಪ ಅವರ ಬೆನ್ನಿಗೆ ನಿಲ್ಲುತ್ತಿದ್ದಾರೆ. ಹೀಗಾಗಿ, ಈ ಬಿಕ್ಕಟ್ಟನ್ನು ಯಾವುದೇ ರೀತಿಯಲ್ಲಿ ಪಕ್ಷಕ್ಕೆ ಧಕ್ಕೆಯಾಗದಂತೆ ಮುಗಿಸಲು ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪರಿಣಾಮ, ಈ ತಿಂಗಳ 26ರಂದು ಸರ್ಕಾರ ಎರಡು ವರ್ಷಗಳನ್ನು ಪೂರೈಸುತ್ತಿರುವ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಪ್ರಸ್ತಾಪಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ ಎಂಬುದು ಅನುಮಾನವಿದೆ. ಈ ಮೊದಲು 25ರಂದು ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡು ಮರುದಿನ 26ರಂದು ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮುಂದಿನ ಕ್ರಮವನ್ನು ಘೋಷಿಸಬಹುದು ಎಂಬ ವದಂತಿ ಹಬ್ಬಿತ್ತು.
ಆತುರಾತುರವಾಗಿ ನಿರ್ಧಾರ ಕೈಗೊಂಡು ಪ್ರಬಲ ಲಿಂಗಾಯತ ಸಮುದಾಯದ ಅವಕೃಪೆಗೆ ತುತ್ತಾಗುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಿನ ಹೆಜ್ಜೆ ಇಡಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಹಾಗಾಗಿ ಈಗಿನ ಬೆಳವಣಿಗೆಗಳ ಫಲಿತಾಂಶಕ್ಕಾಗಿ ಆಗಸ್ಟ್ ಮೊದಲ ವಾರದವರೆಗೆ ಕಾಯಬೇಕಾಗಬಹುದು ಎನ್ನಲಾಗಿದೆ.
ಇನ್ನು ಯಡಿಯೂರಪ್ಪ ಅವರು ದೆಹಲಿಯಿಂದ ವಾಪಸಾದ ಬಳಿಕ ತಮ್ಮ ಪಾಡಿಗೆ ಎಂದಿನಂತೆ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿ ಕೆಲಸ ಮಾಡುತ್ತಿದ್ದಾರೆ. ದೆಹಲಿ ಭೇಟಿಯ ಗುಟ್ಟನ್ನು ಯಾರೊಬ್ಬರ ಬಳಿಯೂ ಬಿಟ್ಟುಕೊಡದೆ ಸಹಜವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಸತತ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪರಿಶೀಲನಾ ಸಭೆಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪವಾದಾಗ ಅನೇಕರು ಬಹಿರಂಗವಾಗಿ ಪರ- ವಿರೋಧದ ಹೇಳಿಕೆಗಳನ್ನು ನೀಡಿದ್ದರು. ಆದರೆ, ಇದೀಗ ಕಳೆದ ಎರಡು ದಿನಗಳಲ್ಲಿ ಅಂಥ ಹೇಳಿಕೆಗಳ ಅಬ್ಬರವಿಲ್ಲ. ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆಯಿದೆ ಎಂಬ ವರದಿಗಳು ಪ್ರಸಾರಗೊಂಡರೂ ಅದನ್ನು ಅಲ್ಲಗಳೆಯುವಂಥ ಹೇಳಿಕೆಗಳು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿಲ್ಲ. ತೆರೆಮರೆಯಲ್ಲಿ ಬಿರುಸಿನ ಚರ್ಚೆ ಮಾತ್ರ ಭರ್ಜರಿಯಾಗಿಯೇ ನಡೆದಿದೆ. ಪಕ್ಷದ ಎಲ್ಲ ಮುಖಂಡರೂ ದೆಹಲಿಯತ್ತ ಮುಖ ಮಾಡಿಕೊಂಡು ಕಾದು ಕುಳಿತಿದ್ದಾರೆ