ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸುವ ಸೇನೆಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಿಎಜಿ , 3,600 ಕೋಟಿ. ರು ಗಳ ಮಹತ್ವದ ಯೋಜನೆ ವ್ಯರ್ಥವಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಲೋಕಸಭೆಗೆ ತನ್ನ ವರದಿ ನೀಡಿರುವ ಸಿಎಜಿ ಸೇನಾ ಶಸ್ತ್ರಾಸ್ತ್ರಗಳ ಕುರಿತಂತೆ ಇತ್ತೀಚೆಗೆ ನಡೆಸಿರುವ ಆಡಿಟಿಂಗ್ ವಿವರಗಳನ್ನು ಸಲ್ಲಿಸಿದೆ. 3,600 ಕೋಟಿ ರು.ಗಳನ್ನು ವ್ಯಯಿಸಿ ತಯಾರಿಸಲಾಗಿದ್ದ ಆಕಾಶ್ ಮಾದರಿಯ ಮೂರನೇ ಆವೃತ್ತಿಯ ಕ್ಷಿಪಣಿಗಳು ಪರೀಕ್ಷೆಗಳಲ್ಲಿ ವಿಫಲವಾಗಿದೆ. ಇದರಿಂದಾಗಿ, ಯುದ್ಧದಂಥ ಸಮಯದಲ್ಲಿ ಭಾರತ ಕ್ಷಿಪಣಿಗಳ ಅಭಾವ ಎದುರಿಸಬೇಕಾಗುತ್ತದೆ ಎಂದು ಸಿಎಜಿ ಆತಂಕ ವ್ಯಕ್ತಪಡಿಸಿದೆ.
ಈಗಾಗಲೇ ಆಕಾಶ್, ಆಕಾಶ್ ಎಂಕೆ -2 ಕ್ಷಿಪಣಿಗಳು ಯಶಸ್ವಿಯಾಗಿದ್ದು, ಅವುಗಳನ್ನು ಭಾರತೀಯ ಸೇನೆ ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಇದೀಗ ಮೂರನೇ ಆವೃತ್ತಿಯಲ್ಲಿ ಸುಮಾರು 6 ಕ್ಷಿಪಣಿಗಳ ತಯಾರಿಕೆಗೆ ಅನುವು ಮಾಡಲಾಗಿತ್ತು. ಆದರೆ, ಅವು ಪರೀಕ್ಷೆಯಲ್ಲಿ ವಿಫಲವಾಗಿವೆ. ಭೂಮಿಯಿಂದ ಆಗಸದ ಮೇಲಿನ ಗುರಿಗಳನ್ನು ಧ್ವಂಸ ಮಾಡಬಲ್ಲ ಆಕಾಶ್ ಕ್ಷಿಪಣಿಗಳನ್ನು ಇಂಡೋ-ಚೀನಾ ಗಡಿಯ ಸುಮಾರು 5 ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲು ಸೇನೆ ಮುಂದಾಗಿದೆ. ಈ ಕ್ಷಿಪಣಿ ಪರಿಪೂರ್ಣವಾಗಿ ಬಳಕೆಗೆ ಯೋಗ್ಯವಾಗಿಲ್ಲ. ಸತತ ಪರೀಕ್ಷೆಗಳ ಹೊರತಾಗಿಯೂ ಕ್ಷಿಪಣಿ ಇನ್ನೂ ಶೇ.30 ರಷ್ಟು ವೈಫಲ್ಯ ಎದುರಿಸುತ್ತಿದೆ. ಹೀಗಿರುವಾಗ ಉದ್ವಿಗ್ನವಾಗಿರುವ ಭಾರತ-ಚೀನಾ ಗಡಿಯಲ್ಲಿ ಕ್ಷಿಪಣಿ ನಿಯೋಜನೆ ಮಾಡುತ್ತಿರುವುದೇಕೆ ಎಂದು ಸಿಎಜಿ ಪ್ರಶ್ನಿಸಿದೆ.