ತಾಕತ್ತಿದ್ರೆ ನನ್ನನ್ನು ಬಂಧಿಸಿ: ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಸವಾಲ್

ಮಂಗಳವಾರ, 3 ಜನವರಿ 2017 (18:50 IST)
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುದೀಪ್ ಬಂಡೋಪಾಧ್ಯಾಯರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರಿಂದ ಆಕ್ರೋಶಗೊಂಡ ಟಿಎಂಸಿ ಪಕ್ಷದ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ತಾಕತ್ತಿದ್ರೆ ನನ್ನನ್ನು ಬಂಧಿಸಲಿ ಎಂದು ಸವಾಲ್ ಹಾಕಿದ್ದಾರೆ. 
 
ಪ್ರಧಾನಿ ಮೋದಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳಿಂದ ನೋಟು ನಿಷೇಧ ವಿರೋಧಿಸುವ ತಮ್ಮ ರಾಜಕೀಯ ವಿರೋಧಿಗಳ ಮೇಲೆ ದಾಳಿ ಮಾಡಿಸುತ್ತಿದ್ದಾರೆ.ಇಂತಹ ಪೊಳ್ಳು ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದು ಗುಡುಗಿದ್ದಾರೆ.
 
ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಸಿಬಿಐ ಬಂಧಿಸಿರುವುದು ಆಘಾತ ಮೂಡಿಸಿದೆ.ಪ್ರಧಾನಿ ಮೋದಿ, ತೃಣಮೂಲ ಪಕ್ಷದ ನಾಯಕರಾದ ಅಭಿಷೇಕ್ ಬ್ಯಾನರ್ಜಿ, ಸೋವನ್ ಚಟರ್ಜಿ ಮತ್ತು ಫಿರ್ಹಾದ್ ಹಕೀಮ್ ಅವರನ್ನು ಬಂಧಿಸುವ ಷಢ್ಯಂತ್ರ ರೂಪಿಸಿದ್ದಾರೆ ಎನ್ನುವ ಮಾಹಿತಿ ನನಗಿದೆ ಎಂದು ತಿಳಿಸಿದ್ದಾರೆ.
 
ಪ್ರಧಾನಿ ಮೋದಿಯ ಷಡ್ಯಂತ್ರಗಳಿಂದ ಆಘಾತವಾಗಿದೆ ಆದರೆ ಹೆದರಿಕೆಯಾಗಿಲ್ಲ. ಮೋದಿಗೆ ತಾಕತ್ತಿದ್ರೆ ನನ್ನನ್ನು ಸೇರಿದಂತೆ ಎಲ್ಲಾ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರನ್ನು ಬಂಧಿಸಲಿ. ಎಷ್ಟು ಧೈರ್ಯಯಿದೆ ಎನ್ನುವುದನ್ನು ನೋಡುತ್ತೇನೆ. ಇತರರನ್ನು ಮೌನವಾಗಿಸಬಹುದು. ಆದರೆ, ನನ್ನನ್ನು ಮೌನವಾಗಿಸಲು ಸಾಧ್ಯವಿಲ್ಲ. ಜನತೆಯ ಧ್ವನಿಯನ್ನು ತುಳಿಯಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ