ದೆಹಲಿ ಸರ್ಕಾರಿ ಆಸ್ಪತ್ರೆಗೆ ಅಚಾನಕ್ ಆಗಿ ಭೇಟಿ ನೀಡಿದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಲ್ಲಿನ ಅವ್ಯವಸ್ಥತೆ ಕಂಡು ಗರಂ ಆದ ಸನ್ನಿವೇಶ ಕಂಡು ಬಂತು. ರೋಗಿಗಳು ಸಾಲುಗಟ್ಟಿ ನಿಂತಿದ್ದರೂ ಕೆಲ ಸಿಬ್ಬಂದಿ ಅವರಿಗೆ ಸಹಕರಿಸುತ್ತಿರಲಿಲ್ಲ, ಅದರಲ್ಲೂ ಒಬ್ಬ ಉದ್ಯೋಗಿ ಕಂಪ್ಯೂಟರ್‌ನಲ್ಲಿ ಸಿನಿಮಾ ವೀಕ್ಷಿಸುವುದರಲ್ಲಿಯೇ ಬ್ಯುಸಿಯಾಗಿದ್ದರು . ಇದನ್ನು ಕಂಡ ಸಚಿವರು ಕೆಂಡಾಮಂಡಲರಾದರು.
ಈ ಘಟನೆಯ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಆಮ್ ಆದ್ಮಿ ಪಕ್ಷದ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಆಗಿದೆ. ವಿಡಿಯೋವನ್ನು 2,000 ಜನ ಹಂಚಿಕೊಂಡಿದ್ದು, ದೆಹಲಿ ಸರ್ಕಾರದ ಕಾರ್ಯಸಾಧನೆಯನ್ನು ಮೆಚ್ಚಿ ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಉದ್ಯೋಗಿ, ಉಪ ಮುಖ್ಯಮಂತ್ರಿ ಬಳಿ ಕ್ಷಮಿಸುವಂತೆ ಮೊರೆ ಇಡುತ್ತಿರುವುದು ಕಂಡು ಬಂದಿದ್ದು, ಆತನ ಮಾತಿಗೆ ಗಮನ ಕೊಡದ ಸಿಸೋಡಿಯಾ ನಿನ್ನ ಸುಪರ್‌ವೈಸರ್ ಬಳಿ ಮಾತನಾಡುವಂತೆ ಹೇಳಿ ಅಲ್ಲಿಂದ ಮರಳಿದ್ದಾರೆ.