ಖಟ್ಟರ್ ಗುರುಗ್ರಾಮವನ್ನು ಗುರುಜಾಮ್‌‌ ಆಗಿ ಪರಿವರ್ತಿಸಿದ್ದಾರೆ: ಆಪ್

ಶನಿವಾರ, 30 ಜುಲೈ 2016 (11:59 IST)
ಗುರ್‌ಗಾಂವ್‌ ನೀರಿನಲ್ಲಿ ಮುಳುಗಲು ಪರೋಕ್ಷವಾಗಿ ಅರವಿಂದ್ ಕೇಜ್ರಿವಾಲ್ ಕಾರಣ ಎಂದು ಆರೋಪಿಸಿದ್ದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ತಿರುಗೇಟು ನೀಡಿರುವ ಆಪ್, ಖಟ್ಟರ್ ಗುರುಗ್ರಾಮವನ್ನು ಗುರುಜಾಮ್ ಆಗಿ ಪರಿವರ್ತಿಸಿದ್ದಾರೆ ಎಂದು ಕುಹಕವಾಡಿದೆ.

ದೆಹಲಿ ಸರ್ಕಾರದ ಅಸಹಕಾರವೇ ಇದಕ್ಕೆಲ್ಲಾ ಕಾರಣ . ದೆಹಲಿಯ ನಜಾಫ್‍ಗಢ್ ಮೋರಿಯ ಮೂಲಕ ಗುರ್‍‍ಗಾಂವ್‍ನ ನೀರು ಹರಿದುಹೋಗಬೇಕಾಗಿತ್ತು. ಆದರೆ ಆ ಮೋರಿಯನ್ನು ದೆಹಲಿಯಲ್ಲಿ ಅರ್ಧ ಮುಚ್ಚಿರುವುದರಿಂದ ಗುರ್‍‍ಗಾಂವ್‍ನಲ್ಲಿ ನೀರು ಸ್ಥಗಿತಗೊಂಡು ಈ ಪರಿಯಲ್ಲಿ ಸಮಸ್ಯೆ ಉದ್ಭವಿಸಿದೆ ಎಂದು ಖಟ್ಟರ್ ಟ್ವಿಟರ್ ಮೂಲಕ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದರು.

ಖಟ್ಟರ್ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ,ಗುರ್‍‍ಗಾಂವ್‍ನ್ನು ಗುರುಗ್ರಾಮ್ ಎಂದು ಹೆಸರು ಬದಲಿಸಿದ ಕೂಡಲೇ ಅಭಿವೃದ್ಧಿ ಎನಿಸುವುದಿಲ್ಲ. ಅದಕ್ಕೆ ಸರಿಯಾದ ಯೋಜನೆ ಮತ್ತು ನಿರ್ವಹಣೆ ಬೇಕು ಎಂದಿದ್ದರು.

ಮತ್ತೀಗ ಖಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆಪ್ ವಕ್ತಾರ ಆಶುತೋಷ್,  ಹರಿಯಾಣಾ ಜನತೆ ಮುಖ್ಯಮಂತ್ರಿಯನ್ನು ಬಯಸಿದ್ದರು. ಆದರೆ ಸಿಕ್ಕಿದ್ದು ಕಟ್ಟರ್. ನೀವು ಕಟ್ಟರ್‌ನ್ನು ಮುಖ್ಯಮಂತ್ರಿಯಾಗಿಸಿದ್ದಕ್ಕೆ ಸಿಕ್ಕಿದ್ದು ಇದೇ. ಅವರು ಗುರುಗ್ರಾಮವನ್ನು ಗುರುಜಾಮ್ ಆಗಿ ಬದಲಾಯಿಸಿದ್ದಾರೆ ಎಂದು ಕಿಚಾಯಿಸಿದ್ದಾರೆ.

ಗುರುವಾರವಿಡಿ ಸುರಿದ ಭಾರಿ ಮಳೆಗೆ ಹರಿಯಾಣಾದ ಗುರ್‌ಗಾಂವ್ ಸಂಪೂರ್ಣವಾಗಿ ಜಲಾವೃತವಾಗಿದ್ದು ಸತತ 10 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೂ ಪರದಾಡಬೇಕಾಯಿತು.  ಈ ಅವ್ಯವಸ್ಥೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರೇ ಕಾರಣ ಎಂದು ಹರ್ಯಾಣಾದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಆರೋಪಿಸಿದ್ದರು.

ಕೇಂದ್ರದ ಜತೆಗಿನ ತೀವ್ರ ಜಟಾಪಟಿಯ ನಡುವೆ 12 ದಿನಗಳ ಬ್ರೇಕ್ ತೆಗೆದುಕೊಳ್ಳಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಸ್ಟ್ 1 ರಿಂದ 10 ದಿನಗಳ ಕಾಲ ವಿಪಾಸ್ಸನ ಧ್ಯಾನ (ಭಾರತದ ಪುರಾತನ ಧ್ಯಾನತಂತ್ರದ ಒಂದು ಮಾದರಿ)ಕ್ಕೆ ಶರಣಾಗಲಿದ್ದಾರೆ. ಈ ಸಂದರ್ಭದಲ್ಲಿ ಕೇಜ್ರಿವಾಲ್ ವೃತ್ತಪತ್ರಿಕೆ, ದೂರದರ್ಶನ ಮತ್ತು ಇತರ ಎಲ್ಲ ಮಾಧ್ಯಮಗಳಿಂದ ದೂರವಿರಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸರ್ಕಾರವನ್ನು ಸಂಭಾಳಿಸಲಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ