ತಮಿಳುನಾಡು ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಮೀಸಲು : ಮದ್ರಾಸ್ ಹೈಕೋರ್ಟ್
ಗುರುವಾರ, 7 ಏಪ್ರಿಲ್ 2022 (14:21 IST)
ಚೆನ್ನೈ : ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ ಮೀಸಲಿರಿಸುವ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.
ತಮಿಳುನಾಡಿನಲ್ಲಿ ಪದವಿಪೂರ್ವ ಕೋರ್ಸ್ಗಳಿಗೆ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ಕೋಟಾವನ್ನು ಮೀಸಲಿರಿಸುವ ಸರ್ಕಾರದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.
ಸರ್ಕಾರ ಘೋಷಣೆ ಮಾಡಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಖಾಸಗಿ ಶಾಲಾ ವಿದ್ಯಾರ್ಥಿಗಳು ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳು ತಮಗೂ ಇದೇ ರೀತಿಯ ಸೌಲಭ್ಯಗಳನ್ನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ನೇತೃತ್ವದ ಮೊದಲ ಪೀಠ ಈ ತೀರ್ಪು ಪ್ರಕಟಿಸಿತು.
ವೈದ್ಯಕೀಯ ಕೋರ್ಸ್ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ. ಅಲ್ಲದೆ ಐದು ವರ್ಷಗಳಲ್ಲಿ ಮೀಸಲಾತಿ ಕೋಟಾವನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಲ್ಲದೆ ಮೀಸಲಾತಿಯನ್ನು ಪ್ರಶ್ನಿಸಿ ಮತ್ತು ಅದೇ ರೀತಿಯ ಪ್ರಯೋಜನಗಳನ್ನು ಕೋರಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.