ಕಾಂಗ್ರೆಸ್ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ!

ಬುಧವಾರ, 28 ಜುಲೈ 2021 (08:57 IST)
ನವದೆಹಲಿ(ಜು.28): ಸಂಸತ್ತಿನ ಮುಂಗಾರು ಅಧಿವೇಶನದ ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸದ ವಿಪಕ್ಷ ಕಾಂಗ್ರೆಸ್ ಬಣ್ಣವನ್ನು ಬಯಲು ಮಾಡುವಂತೆ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ.

* ಪೆಗಾಸಸ್ ಸೇರಿ ಇನ್ನಿತರ ವಿಚಾರಗಳ ಸಂಬಂಧ ವಿಪಕ್ಷಗಳ ಗದ್ದಲ
* ಕಾಂಗ್ರೆಸ್ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ
* ಎಲ್ಲಾ ವಿಚಾರಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ
* ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ನಿಂದ ಗದ್ದಲ: ಮೋದಿ

ಪೆಗಾಸಸ್ ಹಗರಣ ಮತ್ತು ಕೃಷಿ ಮಸೂದೆ ಸೇರಿದಂತೆ ಇನ್ನಿತರ ವಿಚಾರಗಳ ಚರ್ಚೆಗೆ ಪಟ್ಟು
ಹಿಡಿದಿರುವ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸಂಸತ್ತಿನ ಕಲಾಪದಲ್ಲಿ ಕೋಲಾಹಲ ಮತ್ತು ಗದ್ದಲ ಎಬ್ಬಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ‘ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ಸಂಸತ್ತಿನ ಕಲಾಪಕ್ಕೆ ಪದೇ-ಪದೇ ಅಡ್ಡಿಪಡಿಸುತ್ತಿದೆ. ಕಳೆದ ವಾರ ಕೋವಿಡ್ ಪರಿಸ್ಥಿತಿ ಸೇರಿ ಇನ್ನಿತರ ವಿಚಾರಗಳ ಪರಿಶೀಲನೆಗಾಗಿ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯನ್ನು ಸಹ ಕಾಂಗ್ರೆಸ್ ಬಹಿಷ್ಕರಿಸಿತ್ತು. ಈ ಸಭೆಗೆ ಬರುವ ಇತರ ಪಕ್ಷಗಳನ್ನು ಸಹ ಕಾಂಗ್ರೆಸ್ ತಡೆ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಇನ್ನಿತರ ವಿಪಕ್ಷಗಳ ನಡವಳಿಕೆಗಳನ್ನು ಮಾಧ್ಯಮ ಮುಖಾಂತರ ಜನತೆಯೆದುರು ತೆರೆದಿಡಿ’ ಎಂದು ಮೋದಿ ಅವರು ಕರೆಕೊಟ್ಟರು.
ಹಳ್ಳಿಗಳಲ್ಲಿ 75ನೇ ಸ್ವಾತಂತ್ರ್ಯ ದಿನ: ಸಂಸದರಿಗೆ ಮೋದಿ ಕರೆ
‘ಆಗಸ್ಟ್ 15ರಿಂದ ಆರಂಭ ಆಗಲಿರುವ ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಬಿಜೆಪಿ ಸಂಸದರು ಪ್ರತೀ ಹಳ್ಳಿಗೂ ಕೊಂಡೊಯ್ಯಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿದ್ದಾರೆ.
ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ ಸಾರ್ವಜನಿಕರ ಜತೆಗೂಡಿ ಸ್ವಾತಂತ್ರ್ಯೋತ್ಸವ ಆಚರಿಸಬೇಕು. ಇದನ್ನು ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತಗೊಳಿಸಬಾರದು’ ಎಂದು ಸೂಚಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ