ಭೋಪಾಲ್ : ಸಂವಿಧಾನ ಉಳಿಸಲು ಪ್ರಧಾನಿ ಮೋದಿ ಹತ್ಯೆ ಮಾಡಿ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಕಾಂಗ್ರೆಸ್ನ ಮಾಜಿ ಸಚಿವ ರಾಜಾ ಪಟೇರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಪಟೇರಿಯಾ ಅವರು, “ಸಂವಿಧಾನವನ್ನು ಉಳಿಸಲು ಪಿಎಂ ಮೋದಿಯನ್ನು ಕೊಲ್ಲಬೇಕು” ಎಂದು ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದರು.
ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಟೇರಿಯಾ ಅವರ ಹೇಳಿಕೆಗಳನ್ನು ಆಧರಿಸಿ, ಮಧ್ಯಪ್ರದೇಶ ಸರ್ಕಾರವು ಮಾಜಿ ಸಚಿವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿತ್ತು.
ಪನ್ನಾದ ಪಾವಾಯಿ ಪೊಲೀಸ್ ಠಾಣೆಯಲ್ಲಿ ಪಟೇರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ನಾಯಕನ ಹೇಳಿಕೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, “ಭಾರತ್ ಜೋಡೋ ಯಾತ್ರೆ ಮಾಡುವವರ ನಿಜವಾದ ಮುಖ ಹೊರಬಂದಿದೆ” ಎಂದು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಟೀಕೆ ವ್ಯಕ್ತಪಡಿಸಿದ್ದಾರೆ.