ಮೋದಿಯ ಸಚಿವ ಸಂಪುಟ ರಚನೆಯಲ್ಲಿ ಹಸ್ತಕ್ಷೇಪವಿಲ್ಲ: ಆರೆಸ್ಸೆಸ್

ಸೋಮವಾರ, 19 ಮೇ 2014 (13:33 IST)
ಕೇಂದ್ರ ಸರಕಾರ  ರಚನೆಯ  ಪ್ರಕ್ರಿಯೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್ ಹೇಳಿದ್ದು, ಈ ಮೂಲಕ  ತನ್ನ ತಂಡವನ್ನು ಆಯ್ದುಕೊಳ್ಳುವಲ್ಲಿ ಮೋದಿ ಸ್ವತಂತ್ರರಾಗಿದ್ದಾರೆ. ಆದರೆ  ಸಚಿವ ಸ್ಥಾನಕ್ಕಾಗಿ ಈಗಾಗಲೇ ತೀವೃ ಲಾಬಿ ನಡೆಯುತ್ತಿದ್ದು ಹಿರಿಯ ನಾಯಕರು ತಮ್ಮ ಹಕ್ಕನ್ನು ಪಡೆಯುವಲ್ಲಿ ಮಾತ್ರ ಸಂಘ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಹೇಳಲಾಗುತ್ತಿದೆ.
 
"ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಪಕ್ಷಕ್ಕಾಗಲೀ, ಮೋದಿಯವರಿಗಾಗಲಿ ಯಾವುದೇ ರೀತಿಯ ಸಲಹೆಯನ್ನು ನೀಡಿಲ್ಲ. ರಾಜಕೀಯದಲ್ಲಿ ಅಥವಾ ಸರಕಾರದಲ್ಲಿ ಪಾತ್ರವಹಿಸಲು ಸಂಘ ಎಂದಿಗೂ ರಿಮೋಟ್ ಕಂಟ್ರೋಲ್‌ನಂತೆ ವರ್ತಿಸುವುದಿಲ್ಲ" ಎಂದು ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್   ಹೇಳಿದ್ದಾರೆ.  
 
"ಆದಾಗ್ಯೂ, ಸಂಘ ಸಲಹೆಗಳನ್ನು ನೀಡಬಹುದು , ಮತ್ತು ಸರ್ಕಾರ ಪರಿವಾರದ ಸೈದ್ಧಾಂತಿಕ ನಿಲುವುಗಳಿಗೆ ಬದ್ಧವಾಗಿರುತ್ತದೆ  ಎಂಬುದನ್ನು ನಿರೀಕ್ಷಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ  ಜನಪ್ರತಿನಿಧಿಗಳು ಸಂಘದ ಸಿದ್ಧಾಂತ ಬಗ್ಗೆ ಅರಿವು ಹೊಂದಿದ್ದು ಮತ್ತು ಅದಕ್ಕನುಗುಣವಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ಸರ್ಕಾರದ ಕಾರ್ಯ ಮತ್ತು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಸಂಘಕ್ಕೆ  ಯಾವುದೇ ಅವಶ್ಯಕತೆ ಇಲ್ಲ . ಆದಾಗ್ಯೂ, ಬೇಕಾದಲ್ಲಿ, ಸಂಘ ಸಲಹೆಗಳನ್ನು ನೀಡಬಹುದು" ಎಂದು ಮಾಧವ್ ಹೇಳಿದ್ದಾರೆ. 
 
ಬಿಜೆಪಿ ನಾಯಕರಾದ ಅನಂತ್ ಕುಮಾರ್, ರಾಜೀವ್ ಪ್ರತಾಪ್ ರೂಢಿ, ಹರ್ಷವರ್ಧನ್  ಸಂಘದ ದೆಹಲಿಯ ಮುಖ್ಯ ಕಚೇರಿಯಲ್ಲಿ ಕಂಡು ಬಂದಿದ್ದರಿಂದ ಮಾಧವ್ ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಮೋದಿ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನಕ್ಕೆ ತೀವೃ ಲಾಬಿ ನಡೆಯುತ್ತಿದೆ. 
 
ಬಿಜೆಪಿ ವ್ಯವಹಾರಗಳಲ್ಲಿ ಸಂಘ ಒಂದು ದೊಡ್ಡ ಪಾತ್ರವನ್ನು ವಹಿಸುತ್ತದೆ  ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಇದಕ್ಕೆ ಪ್ರತಿಕ್ರಯಿಸಿರುವ  ಮಾಧವ್ "ಜನರು, ಆದರಲ್ಲೂ ಆರ್‌ಎಸ್‌ಎಸ್ ಮುಂದಿನ ಹೆಜ್ಜೆ ಏನು ಎಂದು ತಿಳಿಯ ಬಯಸುವ ಕಾಂಗ್ರೆಸ್ ಈ ರೀತಿ ಹೇಳುವುದು ಸಹಜವಾದುದು". 
 
"ಇದೇ ಪ್ರಶ್ನೆಯನ್ನು ಮಾಜಿ ಪ್ರಧಾನಿ ವಾಜಪೇಯಿಯವರಿಗೂ ಕೇಳಲಾಗಿತ್ತು. ಅದಕ್ಕೆ ಉತ್ತರಿಸುತ್ತ ಅವರು "ನಾನೇ ನೇರ ರಿಮೋಟ್ ಕಂಟ್ರೋಲ್" ಎಂದು ಹೇಳಿದ್ದರು" ಎಂದು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ