ನಿನ್ನೆ ತಮ್ಮ ಪಕ್ಷದ ಗೆಲುವು ನಿಶ್ಚಿತವಾಗುತ್ತಿದ್ದಂತೆ, ಮೋದಿ ಮಾಡಿದ ಪ್ರಥಮ ಕೆಲಸ ಹೆತ್ತ ತಾಯಿಯನ್ನು ಕಣ್ತುಂಬಿಸಿಕೊಂಡು ಆಶೀರ್ವಾದ ತೆಗೆದುಕೊಂಡಿದ್ದು. ಅಮ್ಮ ವಾಸವಾಗಿರುವ ಮನೆಗೆ ತೆರಳಿ ಮೋದಿಯವರು ಆಕೆಯ ಪಾದಕ್ಕೆರಗಿದಾಗ, ಮುದ್ದಿನ ಕೀರ್ತಿಶಾಲಿ ಮಗನ ತಲೆಯ ಮೇಲೆ ತಮ್ಮ ಕರಗಳನ್ನಿಟ್ಟು, ಸಿಹಿ ತಿನ್ನಿಸಿದ 92ರ ವಯಸ್ಸಿನ ಹೀರ್ಬಾ ಮೋದಿ ತಮ್ಮ ಮಗನ ಸಾಧನೆಗೆ ಅಪಾರ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಮೋದಿ, ತಮ್ಮ ಕಿರಿಯ ಸಹೋದರ ಪಂಕಜ್ ಜತೆ ಗಾಂಧಿನಗರ ಸೆಕ್ಟರ್ 22ರಲ್ಲಿ ವಾಸವಾಗಿರುವ ಅಮ್ಮನನ್ನು ಕಾಣಲು ಬಂದಾಗ ಬೀದಿಗಳಲ್ಲಿ ನೆರೆದಿದ್ದ ಜನ, "ನೋಡು ನೋಡು ಯಾರು ಬಂದ, ಹೀರ್ಬಾಳ ವಜ್ರ ಬಂದ" (ದೇಖೋ ದೇಖೋ ಕೌನ್ ಆಯಾ, ಹೀರ್ಬಾ ಕಾ ಹೀರಾ ಆಯಾ) ಎಂದು ಘೋಷಣೆ ಜತೆ ಸ್ವಾಗತಿಸಿದರು. ತಮ್ಮ ಕಾಲ್ಗಳನ್ನು ಸ್ಪರ್ಶಿಸಿದ ಮಗನ ಹಣೆಗೆ ವಿಜಯ ತಿಲಕವನ್ನಿಟ್ಟ ಹೀರ್ಬಾ ಸಿಹಿ ತಿನ್ನಿಸಿ ಆರ್ಶೀರ್ವದಿಸಿದರು.
ಮೋದಿ ತಮ್ಮ ತಾಯಿಯನ್ನು ಭೇಟಿಯಾಗುವುದು ಕಡಿಮೆಯೇ. ಆದರೆ ದೀಪಾವಳಿ, ವಿಶೇಷ ದಿನ. ತಮ್ಮ ಹುಟ್ಟುಹಬ್ಬದ ದಿನಗಳಂದು, ತಮ್ಮ ಜೀವನದಲ್ಲಿ ವಿಶೇಷವಾದದ್ದು ಘಟಿಸಿದರೆ, ಚುನಾವಣೆಯಲ್ಲಿ ಗೆದ್ದರೆ ತಾಯಿಯನ್ನು ಭೇಟಿಯಾಗುತ್ತಾರೆ.
ತಮ್ಮ ಮಗನನ್ನು ಗುಜರಾತ್ ಗದ್ದಿಗೆಯ ಮೇಲೆ ಕಂಡಿದ್ದ ತಾಯಿಗೆ ಆತ ದೇಶವನ್ನು ಮುನ್ನಡೆಸಬೇಕೆಂಬುದು ಬಹುದಿನಗಳ ಆಶೆಯಾಗಿತ್ತು ಮತ್ತು ಆತ ಅದನ್ನು ಸಾಧಿಸಿಯೇ ಸಾಧಿಸುತ್ತಾನೆ ಎಂಬ ಬಲವಾದ ನಂಬಿಕೆ ಹೊಂದಿದ್ದ ಅವರು, ಪುತ್ರನ ಶ್ರೋಯೋಭಿವೃದ್ಧಿ ಬಯಸಿ ವೃತಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.