ಶಬರಿಮಲೆಗೆ ಮಹಿಳೆಯರ ಪ್ರವೇಶ ನಿರಾಕರಣೆಗೆ ಪೌರಾಣಿಕ ಕಾರಣವೇನು ಗೊತ್ತಾ?
ಶುಕ್ರವಾರ, 28 ಸೆಪ್ಟಂಬರ್ 2018 (16:17 IST)
ಬೆಂಗಳೂರು: ಶಬರಿಮಲೆ ದೇಗುಲಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಏನೋ ತೀರ್ಪು ನೀಡಿದೆ. ಆದರೆ ಈ ಇತಿಹಾಸ ಪ್ರಸಿದ್ಧ ದೇಗುಲಕ್ಕೆ ಇದುವರೆಗೆ ಮಹಿಳೆಯರು ಪ್ರವೇಶಿಸದೇ ಇರಲು ಐತಿಹಾಸಿಕ ಕತೆಯೊಂದಿದೆ. ಅದನ್ನು ತಿಳಿದುಕೊಳ್ಳೋಣ.
ಭಸ್ಮಾರುನ ವಧೆ ಮಾಡಲು ಮಹಾವಿಷ್ಣು ಮೋಹಿನಿಯ ರೂಪ ತಾಳಿದಾಗ ಆಕೆಯ ಸೌಂದರ್ಯಕ್ಕೆ ಮರುಳಾಗಿ ಶಿವ ಆಕೆಯೊಡನೆ ಸೇರುತ್ತಾನೆ. ಇವರಿಬ್ಬರ ಸಂಗಮದಿಂದ ಅಯ್ಯಪ್ಪನ ಜನನವಾಗುತ್ತದೆ ಎಂಬ ಕತೆಯಿದೆ.
ಹರಿ ಹರನ ಪುತ್ರನಾಗಿರುವ ಅಯ್ಯಪ್ಪ ಯೌವನದಲ್ಲಿಯೇ ತನ್ನ ರಾಜ್ಯದಲ್ಲಿ ಜನಾನುರಾಗಿಯಾಗಿದ್ದ. ಹೀಗಿರಲು ಒಂದು ದಿನ ರಾಕ್ಷಿಸಿಯೊಬ್ಬಳ ಉಪಟಳದ ಬಗ್ಗೆ ಅಯ್ಯಪ್ಪನಿಗೆ ತಿಳಿದುಬರುತ್ತದೆ. ಆಕೆ ಹರಿ ಹರರ ಪುತ್ರನಿಂದ ಮಾತ್ರ ತನ್ನ ಸಾವು ಎಂದು ಬ್ರಹ್ಮನಿಂದ ವರ ಪಡೆದಿರುತ್ತಾಳೆ. ಅದರಂತೆ ಅಯ್ಯಪ್ಪ ಸ್ವಾಮಿ ಆಕೆಯನ್ನು ವಧಿಸುತ್ತಾನೆ.
ಆದರೆ ಆ ರಾಕ್ಷಸಿ ಶಾಪದಿಂದಾಗಿ ರಾಕ್ಷಸಿ ರೂಪದಲ್ಲಿತ್ತಾಳೆ. ನಿಜವಾಗಿ ಆಕೆ ಸುಂದರ ಹೆಣ್ಣಾಗಿರುತ್ತಾಳೆ. ಅಯ್ಯಪ್ಪನ ಕೈಯಲ್ಲಿ ಸೋತು ಶಾಪ ವಿಮೋಚನೆಯಾದ ಬಳಿಕ ಆ ಸುಂದರ ಯುವತಿ ಅಯ್ಯಪ್ಪನ ಬಳಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾಳೆ. ಆದರೆ ಬ್ರಹ್ಮಚಾರಿಯಾಗಿರಲು ಬಯಸುವ ಅಯ್ಯಪ್ಪ ಎಲ್ಲಿಯವರೆಗೆ ನನ್ನನ್ನು ನೋಡಲು ಕನ್ನಿ ಸ್ವಾಮಿ (ಮಾಲಾಧಾರಿಗಳು)ಗಳು ತನ್ನನ್ನು ಕಾಣಲು ಬರುವುದಿಲ್ಲವೋ ಅಲ್ಲಿಯವರೆಗೆ ತಾನು ಬೇರೆ ಸ್ತ್ರೀಯರನ್ನು ನೋಡುವುದಿಲ್ಲ ಎಂದು ವರ ನೀಡುತ್ತಾನೆ.
ಅದರಂತೆ ಅಯ್ಯಪ್ಪ ಸ್ವಾಮಿಯ ದೇಗುಲವಿರುವ ಶಬರಿಮಲೆಯ ಪಕ್ಕದಲ್ಲೇ ಮಾಳಿಕಪುರತ್ತಮ್ಮ ಎಂಬ ದೇವಾಲಯ ಈಗಲೂ ಇದೆ. ಇಲ್ಲಿ ಮಾಳಿಕಪುರತ್ತಮ್ಮೆಯಾಗಿ ಆ ಯುವತಿ ಅಯ್ಯಪ್ಪನಿಗಾಗಿ ಕಾದು ಈಗಲೂ ನೆಲೆ ನಿಂತಿದ್ದಾಳೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಋತುಮತಿಯಾಗುವ 10 ರಿಂದ 45 ವರ್ಷದೊಳಗಿನ ಮಹಿಳೆಯರು ದೇಗುಲ ಪ್ರವೇಶಿಸುವಂತಿಲ್ಲ ಎಂಬ ನಂಬಿಕೆ ಜಾರಿಗೆ ಬಂತು. ಆದರೆ ಅದಕ್ಕೀಗ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಇದರಿಂದ ಮಾಳಿಕಪುರತ್ತಮ್ಮೆಯ ಶಾಪ ಸಿಗುತ್ತಾ ಎಂದು ಆಸ್ತಿಕರು ಆತಂಕಪಡುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.