ಉಪಚುನಾವಣೆಗೆ ಶೀಘ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ: ಡಿಕೆ ಶಿವಕುಮಾರ್
ಬುಧವಾರ, 29 ಸೆಪ್ಟಂಬರ್ 2021 (12:39 IST)
ಬೆಂಗಳೂರು : ಮುಂಬರುವ ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಂಬರುವ ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಸಂಬಂಧ ಎಐಸಿಸಿ ಈಗಾಗಲೇ ಒಂದು ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದೆ. ಮತ್ತೊಂದು ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಚರ್ಚಿಸಿ ಹೈಕಮಾಂಡ್ಗೆ ಕಳುಹಿಸುತ್ತೇವೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಂಡು ಪ್ರಕಟಿಸಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪದಾಧಿಕಾರಿಗಳ ನೇಮಕ ವಿಚಾರ ಕುರಿತು ಮಾತನಾಡಿದ ಅವರು, ಈಗಾಗಲೇ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಪದಾಧಿಕಾರಿಗಳ ಆಯ್ಕೆಯನ್ನು ಅದರದೇ ಆದ ಪ್ರತಿಕ್ರಿಯೆ ಮೂಲಕ ಮಾಡಬೇಕು. ಯಾರ ಸಾಮರ್ಥ್ಯ ಏನು? ಯಾರು ಯಾವ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ನೋಡಬೇಕು. ಇವೆಲ್ಲವನ್ನೂ ಗಮನಿಸಿ ಆಯುಧ ಪೂಜೆ ಒಳಗೆ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.