ದೊಡ್ಡ ಮನಸ್ಸು ಮಾಡಿ ತಾಯಿಯನ್ನು ಜತೆಗಿಟ್ಟುಕೊಳ್ಳಿ: ಮೋದಿಗೆ ಕೇಜ್ರಿ ಸಲಹೆ

ಮಂಗಳವಾರ, 10 ಜನವರಿ 2017 (14:16 IST)
ಪ್ರಧಾನಿ ನಿವಾಸ ಸಾಕಷ್ಟು ದೊಡ್ಡದಿದೆ, ದೊಡ್ಡ ಮನಸ್ಸು ಮಾಡಿ ನಿಮ್ಮ ತಾಯಿಯನ್ನು ಜತೆಗಿಟ್ಟುಕೊಳ್ಳಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. 
ಗುಜರಾತಿನಲ್ಲಿರುವ ಮೋದಿ ಇಂದು ಮುಂಜಾನೆ ತಮ್ಮ ತಾಯಿಯನ್ನು ಭೇಟಿ ಮಾಡಿ, ಯೋಗಾಭ್ಯಾಸವನ್ನು ಬಿಟ್ಟು ತಾಯಿಯನ್ನು ನೋಡಲು ಹೋಗಿದ್ದೆ. ಇಂದಿನ ಉಪಹಾರವನ್ನು ಅವರೊಡನೆ ಸೇವಿಸಿದೆ. ಅವರೊಂದಿಗೆ ಕಳೆದ ಸಮಯ ಅದ್ಭುತವಾಗಿತ್ತು, ಎಂದು  ಟ್ವಿಟರ್‌ನಲ್ಲಿ ತಮ್ಮ ಸಂತಷದ ಗಳಿಗೆಯನ್ನು ಮೆಲುಕು ಹಾಕಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಮೋದಿ ರಾಜಕೀಯ ಲಾಭಕ್ಕಾಗಿ ತಾಯಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ನಾನು ನನ್ನ ತಾಯಿಯನ್ನು ಜತೆಗಿಟ್ಟುಕೊಳ್ಳುತ್ತೇನೆ. ಪ್ರತಿದಿನ ಆಕೆಯ ಆಶೀರ್ವಾದ ಪಡೆದುಕೊಳ್ಳುತ್ತೇನೆ. ಆದರೆ ಈ ವಿಚಾರವನ್ನು ಸಂಪೂರ್ಣ ಜಗತ್ತಿಗೆ ಪ್ರಸಾರ ಮಾಡುವುದಿಲ್ಲ. ರಾಜಕೀಯ ಲಾಭಕ್ಕಾಗಿ ನನ್ನ ತಾಯಿಯನ್ನು ಸರತಿ ಸಾಲಲ್ಲಿ ನಿಲ್ಲಿಸುವುದಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 
 
ಇನ್ನೊಂದು ಟ್ವೀಟ್‌ನಲ್ಲಿ ಕೇಜ್ರಿವಾಲ್, ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ತಾಯಿ ಮತ್ತು ಪತ್ನಿಯನ್ನು ಜತೆಗೆ ಇಟ್ಟುಕೊಳ್ಳಬೇಕು. ನಿಮ್ಮ ಮನೆ ಸಾಕಷ್ಟು ದೊಡ್ಡದಿದೆ. ದೊಡ್ಡ ಮನಸ್ಸು ಮಾಡಿ ಅವರನ್ನು ಜತೆಗೆ ಕರೆದೊಯ್ಯಿ ಎಂದಿದ್ದಾರೆ. 
 
ಹೀರಾಬಾ ಎಂದು ಕರೆಸಿಕೊಳ್ಳುವ 95 ವರ್ಷದ ಹೀರಾಬೆನ್‌ ಅವರು ಗಾಂಧಿನಗರದಲ್ಲಿ ತಮ್ಮ ಕಿರಿಯ ಮಗ ಪಂಕಜ್‌ ಮೋದಿ ಜೊತೆ ವಾಸವಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೂಡ ಪ್ರಧಾನಿ ತಾಯಿಯನ್ನು ಭೇಟಿಯಾಗಿದ್ದರು. ತಮ್ಮ 66 ನೇ ಜನ್ಮದಿನದಂದು( ಸೆಪ್ಟೆಂಬರ್ 17) ರಂದು ಸಹ ಮೋದಿ ತಾಯಿ ಜತೆ ಸಮಯ ಕಳೆದಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ