ನವದೆಹಲಿ: ಹೆಣ್ಣು ಮಕ್ಕಳಿಗೆ ಕಾನೂನು ಪ್ರಕಾರ ಮದುವೆಯಾಗಲು 18 ವರ್ಷ ವಯಸ್ಸು ನಿಗದಿಯಾಗಿದೆ. ಆದರೆ ಹಿಮಾಚಲಪ್ರದೇಶದಲ್ಲಿ ಯುವತಿಯರ ಮದುವೆ ವಯಸ್ಸನ್ನು ಏರಿಕೆ ಮಾಡಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಬಾಲ್ಯ ವಿವಾಹ ತಡೆಯುವ ನಿಟ್ಟಿನಿಂದ ಹೊಸ ಕಾನೂನು ಜಾರಿಗೆ ತರಲಾಗಿದೆ. ಇದಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಯುವತಿಯರಿಗೆ ವಿವಾಹ ವಯಸ್ಸು 18 ರಿಂದ 21 ಕ್ಕೆ ಏರಿಕೆ ಮಾಡಲಾಗಿದೆ. ಇದಕ್ಕೀಗ ರಾಜ್ಯಪಾಲರ ಸಹಿಗೆ ಕಳುಹಿಸಲಾಗಿದೆ.
ಲಿಂಗ ಸಮಾನತೆಯನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಈ ಹೊಸ ಕಾನೂನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಭಾರತದ ಹೆಚ್ಚಿನ ಭಾಗಗಳಂತೆ ಹಿಮಾಚಲ ಪ್ರದೇಶದಲ್ಲಿ ಮದುವೆಯಾಗಲು 18 ವರ್ಷ ವಯೋಮಿತಿಯಿದೆ. ಆದರೆ ಇದೀಗ ಹಿಮಾಚಲಪ್ರದೇಶದಲ್ಲಿ ಈ ನಿಯಮ ಬದಲಾಗಿದೆ.
ಹೆಣ್ಣು ಮಕ್ಕಳು ಇತ್ತೀಚೆಗಿನ ದಿನಗಳಲ್ಲಿ ವಿದ್ಯಾಭ್ಯಾಸದತ್ತ ಗಮನಹರಿಸುತ್ತಿದ್ದಾರೆ. ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ವಯೋಮಿತಿ ಹೆಚ್ಚಿಸುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಈ ಹೊಸ ಕಾನೂನಿನ ಉದ್ದೇಶವಾಗಿದೆ.