10 ವರ್ಷದ ಮಗುವಿನಿಂದ ಆತ್ಮಾಹುತಿ ಬಾಂಬ್ ದಾಳಿ

ಸೋಮವಾರ, 2 ಜನವರಿ 2017 (10:30 IST)
10 ವರ್ಷದ ಬಾಲಕಿಯೋರ್ವಳು ಆತ್ಮಾಹುತಿ ದಾಳಿ ನಡೆಸಿದ ಬೆಚ್ಚಿ ಬೀಳಿಸುವ ಘಟನೆ ನೈಜೀರಿಯಾದ ಮೈದುಗುಪಿ ಎಂಬಲ್ಲಿ ಶನಿವಾರ ರಾತ್ರಿ 9.30ಕ್ಕೆ ನಡೆದಿದೆ.

ಘಟನೆಯಲ್ಲಿ ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
 
ನಗರದ ಆಹಾರವಸ್ತುಗಳ ಮಾರಾಟ ಅಂಗಡಿಯಲ್ಲಿ ನ್ಯೂಡಲ್ಸ್ ಖರೀದಿಸುವ ನೆಪದಿಂದ ಬಂದ ಬಾಲಕಿ ಜನರ ಗುಂಪಿನ ಕಡೆ ನಡೆಯುತ್ತಿದ್ದಳು. ಆದರೆ ಗುರಿಯನ್ನು ತಲುಪುವ ಮುನ್ನವೇ ಆಕೆಯ ದೇಹದ ಮೇಲೆ ಅಳವಡಿಸಲಾಗಿದ್ದ ಬಾಂಬ್ ಸ್ಪೋಟಗೊಂಡಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬರು ಗಾಯಗೊಂಡಿದ್ದಾರೆ.
 
ಕೃತ್ಯದ ಹೊಣೆಯನ್ನು ಇದುವರೆಗೆ ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲದಿದ್ದರೂ ಬಾಂಬ್ ಸ್ಪೋಟಕ್ಕೆ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುವ  ಬೋಕೋ ಹರಾಮ್ ಗುಂಪಿನಿಂದ ಈ ದಾಳಿ ನಡೆದಿರಬಹುದೆಂದು ಅಂದಾಜಿಸಲಾಗಿದೆ.
 
ಇದೇ ಸಂದರ್ಭದಲ್ಲಿ ಜನರ ಗುಂಪಿನ ಬಳಿ ಬಂದ ಇನ್ನೊಬ್ಬ ಆತ್ಮಾಹುತಿ ಬಾಂಬ್‌ರನ್ನು ಜನರೇ ಕೊಂದಿದ್ದಾರೆ. ಆಕೆ ಸಹ ಮಹಿಳೆಯಾಗಿದ್ದು ಆಕೆಯ ಮೈಮೇಲೆ ಇದ್ದ ಬಾಂಬ್‌ನ್ನು ಭದ್ರತಾ ಪಡೆ ನಿಷ್ಕ್ರಿಯಗೊಳಿಸಿದೆ.
 

ವೆಬ್ದುನಿಯಾವನ್ನು ಓದಿ