ಪ್ರಧಾನಿ ಬಿಡಿ, ನಿತೀಶ್ ಕುಮಾರ್‌ ಮುಖ್ಯಮಂತ್ರಿಯಾಗಲು ಲಾಯಕ್ಕಿಲ್ಲ: ಆರ್‌ಜೆಡಿ ಸಂಸದ

ಶನಿವಾರ, 21 ಮೇ 2016 (19:10 IST)
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಆರ್‌ಜೆಡಿ ಸಂಸದ ಮೊಹಮ್ಮದ್ ತಸ್ಲೀಮ್, ನಿತೀಶ್ ಕುಮಾರ್‌ಗೆ ಮುಖ್ಯಮಂತ್ರಿಯಾಗುವ ಯೋಗ್ಯತೆಯೇ ಇಲ್ಲ ಪ್ರಧಾನಮಂತ್ರಿಯಾಗುವುದು ದೂರದ ಮಾತು ಎಂದು ಲೇವಡಿ ಮಾಡಿದ್ದಾರೆ.
 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೆಮ್ಮದಿಯ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಯಾಗಿ ರಾಜ್ಯವನ್ನೇ ಸಂಭಾಳಿಸದ ನಿತೀಶ್ ಅದು ಹೇಗೆ ಪ್ರಧಾನಿಯಾಗಿ ದೇಶ ಆಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
 
ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುತ್ತಿಲ್ಲ. ಅಪರಾಧ ಪ್ರಮಾಣಗಳಲ್ಲಿ ಇಳಿಕೆಯಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ, ಮಾಧ್ಯಮಗಳು ಅಪರಾಧ ಸಂಖ್ಯೆಗಳಲ್ಲಿ ಹೆಚ್ಚಳವಾಗಿರುವ ಬಗ್ಗೆ ಅಂಕಿ ಅಂಶಗಳು ಬಹಿರಂಗಪಡಿಸಿವೆ ಎಂದು ತಿಳಿಸಿದ್ದಾರೆ.
 
ಬಿಹಾರ್ ರಾಜ್ಯವನ್ನು ಲೂಟಿಹೊಡೆದು ಹೊರ ರಾಜ್ಯಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಓಡಾಡುತ್ತಿದ್ದಾರೆ. ನಿತೀಶ್ ಮೊದಲು ಬಿಹಾರ್ ರಾಜ್ಯವನ್ನು ಗಮನಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಆರ್‌ಜೆಡಿ-ಜೆಡಿಯು ಮೈತ್ರಿಯನ್ನು ಅಂತ್ಯಗೊಳಿಸಬೇಕು ಎನ್ನುವುದೇ ನನ್ನ ಬಯಕೆ. ಆದರೆ,ಅಂತಿಮ ನಿರ್ಧಾರ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರ್‌ಜೆಡಿ ಸಂಸದ ಮೊಹಮ್ಮದ್ ತಸ್ಲೀಮ್ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ