ಪಾಸ್ ಪೋರ್ಟ್ ಪಡೆಯಲು ಜನನ ಪ್ರಮಾಣ ಪತ್ರದ ಅಗತ್ಯವಿಲ್ಲ

ಸೋಮವಾರ, 24 ಜುಲೈ 2017 (13:47 IST)
ನವದೆಹಲಿ: ಇನ್ನುಮುಂದೆ ಪಾಸ್ ಪೋರ್ಟ್ ಪಡೆಯುವುದಕ್ಕೆ ಜನನ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 
 
ಈ ಕುರಿತು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದ್ದು, ಭಾರತೀಯ ನಾಗರಿಕರಿಗೆ ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಬೇಕಿರುವವರು ಜನನ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಜನ್ಮ ದಿನಾಂಕದ ಧೃಢೀಕರಣಕ್ಕಾಗಿ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಗಳನ್ನು ನೀಡಿದರೆ ಸಾಕು ಎಂದು ಸ್ಪಷ್ಟಪಡಿಸಿದೆ. 
 
1980 ರ ಪಾಸ್ ಪೋರ್ಟ್ ನಿಯಮಗಳ ಪ್ರಕಾರ 26/01/1989 ರ ನಂತರ ಜನಿಸಿದವರು, ಪಾಸ್ ಪೋರ್ಟ್ ಪಡೆಯಬೇಕಿದ್ದರೆ ಜನನ ಪ್ರಮಾಣ ಪತ್ರಗಳನ್ನು ನೀಡುವುದು ಕಡ್ಡಾಯವಾಗಿತ್ತು. ಈಗ ಟಿಸಿ, ಮಾನ್ಯತೆ ಪಡೆದ ಸಂಸ್ಥೆಗಳಿಂದ ಇತ್ತೀಚೆಗೆ ಪೂರ್ಣಗೊಳಿಸಿರುವ ಶಿಕ್ಷಣ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಮತದಾರ ಗುರುತಿನ ಚೀಟಿ, ಎಲ್ಐಸಿ ಬಾಂಡ್ ಗಳನ್ನೂ ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ವೇಳೆ ವಿಚ್ಛೇದನ ತೀರ್ಪಿನ ಪ್ರತಿ, ದತ್ತು ಪ್ರಮಾಣಪತ್ರಗಳನ್ನು ಸಹ ಇನ್ನು ಮುಂದೆ ಪಾಸ್ ಪೋರ್ಟ್ ಪಡೆಯುವ ವೇಳೆಯಲ್ಲಿ ನೀಡುವ ಅಗತ್ಯವಿಲ್ಲ ಎಂದೂ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ