ಮತ್ತೀಗ ವೈರಲ್ ಆಯ್ತು ಸಿಆರ್‌ಪಿಎಫ್ ಯೋಧನ ವಿಡಿಯೋ; ಈತನ ಅಳಲೇನು?

ಗುರುವಾರ, 12 ಜನವರಿ 2017 (10:54 IST)
ಬಿಎಸ್ಎಫ್ ಯೋಧನೋರ್ವ ತಮಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಾರೆ ಎಂದು ಬಾಂಬ್ ಸಿಡಿಸುವುದರ ಮೂಲಕ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದ ಬೆನ್ನಲ್ಲೇ ಸಿಆರ್‌ಪಿಎಫ್ (ಅರೆ ಸೇನಾ ಪಡೆ) ಯೋಧನೋರ್ವ ತಮ್ಮ ಮತ್ತು ಸೇನಾ ಪಡೆಯ ನಡುವೆ ನಡೆಯುತ್ತಿರುವ ಸೌಲಭ್ಯ ತಾರತಮ್ಯದ ಕುರಿತು ಪ್ರಶ್ನೆ ಎತ್ತಿರುವುದು ಬೆಳಕಿಗೆ ಬಂದಿದೆ.
ಹೌದು, ತೇಜ್ ಬಹಾದ್ದೂರ್ ಸಿಂಗ್ ಸೆಲ್ಫಿ ವಿಡಿಯೋದಂತೆ ಮಥುರಾ ನಿವಾಸಿ ಜೀತ್ ಸಿಂಗ್ ಫೇಸ್‌ಬುಕ್ ಪೇಜ್‌ಗೆ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ. 
 
ನಾವು ಯಾವ ಡ್ಯೂಟಿಗೆ ಹಾಕಿದರೂ ಕೆಲಸ ಮಾಡುತ್ತೇವೆ. ರಾಜ್ಯಸಭಾ, ಲೋಕಸಭಾ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತ್ ಚುನಾವಣೆ, ಗುರುದ್ವಾರ, ಮಂದಿರ, ಮಸೀದಿ ರಕ್ಷಣೆ, ವಿವಿ,ಐಪಿ ವಿಐಪಿ ಭದ್ರತೆ- ಹೀಗೆ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡುವ ನಮಗೆ ಮಾತ್ರ ಸೌಲಭ್ಯಗಳಿಂದ ವಂಚಿಸಲಾಗುತ್ತದೆ. 
 
ಸೇನೆ ಮತ್ತು ಅರೆ ಸೇನೆಯ ನಡುವೆ ಭೇದಭಾವ ಮಾಡಲಾಗುತ್ತದೆ. ಅವರಿಗೆ ನೀಡುವ ಸೌಲಭ್ಯಗಳ ಬಗ್ಗೆ ನಮಗೆ ತಕರಾರಿಲ್ಲ. ಆದರೆ ನಮಗೂ ಬೇಕು ಎನ್ನುವುದು ಬೇಡಿಕೆ. ಸೇನೆಗೆ ಪಿಂಚಣಿ ನೀಡಲಾಗುತ್ತಿದೆ. ನಮಗೆ ನೀಡಲಾಗುತ್ತಿದ್ದ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಮಾಜಿ ಸೈನಿಕರ ಕೋಟಾವೂ ನಮಗಿಲ್ಲ. ಕ್ಯಾಂಟೀನ್ ಸೌಲಭ್ಯವಿಲ್ಲ.ಯಾವುದೇ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ', ಎಂದು ಗೋಳು ತೋಡಿಕೊಂಡಿರುವ ಆತ ಈ ಕುರಿತು ಗಮನ ಹರಿಸುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾನೆ. 
 
2004ರ ಬಳಿಕ ಅರೆ ಸೇನಾ ಪಡೆಗೆ ನಿವೃತ್ತಿ ವೇತನವನ್ನು ನಿಲ್ಲಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ