ನ್ಯೂಸ್ ಪೇಪರ್ ಜಾಹೀರಾತು ಮೂಲಕ ತಲಾಖ್ ಕೊಟ್ಟ ಭೂಪ

ಗುರುವಾರ, 6 ಏಪ್ರಿಲ್ 2017 (10:05 IST)
ವಾಟ್ಸಾಪ್, ಫೇಸ್ಬುಕ್, ಪೋಸ್ಟ್ ಕಾರ್ಡ್ ಬಳಿಕ ನ್ಯೂಸ್ ಪೇಪರ್ ಜಾಹೀರಾತು ಮೂಲಕವೂ ತಲಾಖ್ ನೀಡುವ ಪರಿಪಾಠಕ್ಕೂ ಮುನ್ನುಡಿ ಬರೆದಿದ್ದಾನೆ ಸೌದಿಯ ಅನಿವಾಸಿ ಭಾರತೀಯ. ಪತ್ರಿಕೆಯಲ್ಲಿ ಗಂಡ ತಲಾಖ್ ಕೊಟ್ಟಿರುವ ಜಾಹೀರಾತು ಕಂಡು ಶಾಕ್`ಗೆ ಒಳಗಾದ ಹೈದ್ರಬಾದ್`ನ ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾಳೆ.
 

ಹೈದ್ರಾಬಾದ್ ಮೂಲದ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಮೊಹಮ್ಮದ್ ಮುಸ್ತಾಖುದ್ದೀನ್ ಇಂತಹ ಆರೋಪ ಎದುರಿಸುತ್ತಿದ್ದಾನೆ. 2015ರಲ್ಲಿ ಮೊಹಮ್ಮದ್ 25 ವರ್ಷದ ಯುವತಿಯನ್ನ ಮದುವೆಯಾಗಿದ್ದ. ಬಳಿಕ ಪತ್ನಿಯನ್ನ ಸೌದಿಗೆ ಕರೆದೊಯ್ದಿದ್ದ. ಕಳೆದ ತಿಂಗಳು 10 ತಿಂಗಳ ಮಗುವಿನ ಜೊತೆ ದಂಪತಿ ತವರಿಗೆ ಬಂದಿದ್ದರು. ಬಳಿಕ ಮಗು ಮತ್ತು ತಾಯಿಯನ್ನ ಮೊಹಮ್ಮದ್ ಹೈದ್ರಾಬಾದ್`ನಲ್ಲಿ ಬಿಟ್ಟು ತೆರಳಿದ್ದಾನೆ.

ಮೊಹಮ್ಮದ್ ಸೌದಿಗೆ ಹೋಗಿದ್ದೇ ಹೋಗಿದ್ದು ಮೊಹಮ್ಮದ್ ಸಂಬಂಧಿಕರು ಪತ್ನಿಯನ್ನ ಮನೆಗೆ ಸೇರಿಸಿಲ್ಲ. ಈ ಮಧ್ಯೆ, ಸ್ಥಳೀಯ ಉರ್ದು ಪತ್ರಿಕೆಯಲ್ಲಿ ಗಂಡ ನೀಡಿರುವ ತಲಾಖ್ ಜಾಹೀರಾತು ಕಣ್ಣಿಗೆ ಬಿದ್ದಿದೆ. ಪೊಲೀಸರು ಹೇಳುವ ಪ್ರಕಾರ, ಮೊಹಮ್ಮದ್ ಸೌದಿಗೆ ತೆರಳುವ ಮುನ್ನ 20 ಲಕ್ಷ ವರದಕ್ಷಿಣೆಗಾಗಿ ಪತ್ನಿಯನ್ನ ಪೀಡಿಸಿದ್ದ. ಇದೇ ಕಾರಣಕ್ಕೆ ತಲಾಖ್ ನೀಡಿರಬಹುದು ಎಂದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

ವೆಬ್ದುನಿಯಾವನ್ನು ಓದಿ