ಆಪರೇಷನ್ ಸಿಂಧೂರ್‌ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ಪ್ರತಿಬಿಂಬ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

Sampriya

ಭಾನುವಾರ, 25 ಮೇ 2025 (15:02 IST)
ನವದೆಹಲಿ: ಆಪರೇಷನ್ ಸಿಂಧೂರ್‌ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 122ನೇ ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ತೋರಿಸಿದ ಶೌರ್ಯ ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು.

ಏಪ್ರಿಲ್ 22 ರ ಮಾರಕ ಪಹಲ್ಗಾಮ್ ದಾಳಿಗೆ ಗಡಿಯಾಚೆಗಿನ ಸಂಪರ್ಕವನ್ನು ಕಂಡುಕೊಂಡ ನಂತರ, ಭಾರತವು ಮೇ 7 ರಂದು ಆಪರೇಷನ್ ಸಿಂಧೂರ್ ನ್ನು ಪ್ರಾರಂಭಿಸಿತು. ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಗುಂಪುಗಳ ಬಹು ಶಿಬಿರಗಳನ್ನು ನಾಶಪಡಿಸಿತು. ಸಿಂಧೂರ್‌ ಎಂಬ ಹಿಂದಿ ಪದವು ಸಿಂಧೂರ್ ಆಗಿದ್ದು, ಹಿಂದೂ ಮಹಿಳೆಯರು ಮದುವೆಯ ಸಂಕೇತವಾಗಿ ಹಣೆಯ ಮೇಲೆ ಹಾಕಿಕೊಳ್ಳುವ ಕುಂಕುಮವಾಗಿದೆ.

ಮಧ್ಯರಾತ್ರಿ 1:05 ರಿಂದ ಬೆಳಗಿನ ಜಾವ 1:30 ರವರೆಗೆ ನಡೆದ ಈ ಕಾರ್ಯಾಚರಣೆಯು ಒಂದೇ ಬಾರಿಗೆ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲ. ಬದಲಾಗಿ ಬದಲಾಗುತ್ತಿರುವ ಮತ್ತು ದೃಢನಿಶ್ಚಯದ ಭಾರತದ ಪ್ರತಿಬಿಂಬವಾಗಿದೆ. ಇದು ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದ ಬಲದಿಂದ ಬೆಂಬಲಿತವಾದ ನಮ್ಮ ಸೈನಿಕರ ಅಂತಿಮ ಧೈರ್ಯ ಎಂದು ಪ್ರಧಾನಿ ಹೇಳಿದರು.  

ಭಯೋತ್ಪಾದನೆಯ ವಿರುದ್ಧ ಇಡೀ ದೇಶವು ಒಗ್ಗಟ್ಟಾಗಿದೆ ಮತ್ತು ಆಪರೇಷನ್ ಸಿಂಧೂರ ಸಮಯದಲ್ಲಿ ನಮ್ಮ ಪಡೆಗಳು ತೋರಿಸಿದ ಧೈರ್ಯ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದೆ. ಆಪರೇಷನ್​ ಸಿಂಧೂರ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಅದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಪರಿವರ್ತನೆಗೊಳ್ಳುತ್ತಿರುವ ಭಾರತದ ಚಿತ್ರಣವಾಗಿದೆ ಮತ್ತು ಈ ಚಿತ್ರಣವು ಇಡೀ ದೇಶವನ್ನು ದೇಶಭಕ್ತಿಯ ಭಾವನೆಯಿಂದ ತುಂಬಿದೆ ಮತ್ತು ಅದನ್ನು ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಚಿತ್ರಿಸಿದೆ ಎಂದು ಬಣ್ಣಿಸಿದರು.

ಪ್ರಪಂಚದಾದ್ಯಂತ ನಡೆಯುತ್ತಿರುವ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಆಪರೇಷನ್ ಸಿಂಧೂರ ಹೊಸ ವಿಶ್ವಾಸ ಮತ್ತು ಉತ್ಸಾಹವನ್ನು ನೀಡಿದೆ. ಆಪರೇಷನ್ ಸಿಂಧೂರ ದೇಶದ ಜನರ ಮೇಲೆ ಎಷ್ಟೊಂದು ಪ್ರಭಾವ ಬೀರಿದೆ ಎಂದರೆ, ಅನೇಕ ಕುಟುಂಬಗಳು ಅದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ. ಬಿಹಾರದ ಕತಿಹಾರ್, ಉತ್ತರ ಪ್ರದೇಶದ ಕುಶಿನಗರ ಮತ್ತು ಇತರ ಹಲವು ನಗರಗಳಲ್ಲಿ, ಆ ಅವಧಿಯಲ್ಲಿ ಜನಿಸಿದ ಮಕ್ಕಳಿಗೆ ಸಿಂಧೂರ್ ಎಂದು ಹೆಸರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಇದೇ ಸಂದರ್ಭದಲ್ಲಿ ಸೈನಿಕರ ಧೈರ್ಯ, ಕೌಶಲ್ಯ ಮತ್ತು ಸ್ವದೇಶಿ ತಂತ್ರಜ್ಞಾನದ ಬಳಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನಮ್ಮ ಸೈನಿಕರು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದರು. ಅದು ಅವರ ಅದಮ್ಯ ಧೈರ್ಯವಾಗಿತ್ತು. ಅದರ ಜೊತೆಗೆ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದ ಶಕ್ತಿಯೂ ಆಗಿತ್ತು ಎಂದರು.

ಆಪರೇಷನ್ ಸಿಂಧೂರ್ ನಂತರ, ಸ್ಥಳೀಯತೆಗೆ ತುಂಬಾ ಒತ್ತು ನೀಡುತ್ತಿರುವುದು ಹಲವರಿಗೆ ಸ್ಫೂರ್ತಿ ನೀಡಿದೆ. ಪೋಷಕರೊಬ್ಬರು, ನಾವು ಈಗ ನಮ್ಮ ಮಕ್ಕಳಿಗಾಗಿ ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಮಾತ್ರ ಖರೀದಿಸುತ್ತೇವೆ. ದೇಶಭಕ್ತಿ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ ಎಂದರು. ಕೆಲವು ಕುಟುಂಬಗಳಂತೂ ತಮ್ಮ ಮುಂದಿನ ರಜಾದಿನವನ್ನು ಭಾರತದಲ್ಲಿ ಕಳೆಯಲು ಪ್ರತಿಜ್ಞೆ ಮಾಡಿವೆ. ಅನೇಕ ಯುವಕರು ಭಾರತದಲ್ಲಿ ಮದುವೆಯಾಗಲು ಪ್ರತಿಜ್ಞೆ ಮಾಡಿದ್ದಾರೆ. ನಾವು ನೀಡುವ ಪ್ರತಿಯೊಂದು ಉಡುಗೊರೆಯನ್ನು ಭಾರತೀಯ ಕುಶಲಕರ್ಮಿಗಳು ತಯಾರಿಸುತ್ತಾರೆ ಎಂದು ಕೆಲವರು ಹೇಳಿದ್ದಾರೆ ಎಂದು ಪ್ರಧಾನಿ ಮೋದಿ ಮನ್​ ಕಿ ಬಾತ್​​ನಲ್ಲಿ ಹಂಚಿಕೊಂಡರು.

 ಪಹಲ್ಗಾಮ್ ದುರಂತದ ನಂತರ ದುಃಖಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಈ ದಾಳಿಯು ಕಾಶ್ಮೀರದ ಬೆಳೆಯುತ್ತಿರುವ ಶಾಂತಿ ಮತ್ತು ಪ್ರವಾಸೋದ್ಯಮವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಪ್ರಗತಿಯ ಶತ್ರುಗಳ ಹತಾಶ ಕೃತ್ಯವಾಗಿದೆ ಎಂದು ಅವರು ಪುನರುಚ್ಚರಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ