ಮತ್ತೆ ನಾಲಗೆ ಹರಿಬಿಟ್ಟ ಈಶ್ವರಪ್ಪ: ಆಪರೇಷನ್ ಸಿಂಧೂರ್‌ ಟೀಕಿಸುವವರನ್ನು ಗುಂಡಿಕ್ಕಿ ಎಂದ ಮಾಜಿ ಡಿಸಿಎಂ

Sampriya

ಮಂಗಳವಾರ, 20 ಮೇ 2025 (14:21 IST)
Photo Courtesy X
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ. ಆಪರೇಷನ್ ಸಿಂಧೂರದ ಬಗ್ಗೆ ಟೀಕೆ ಮಾಡುವವರಿಗೆ ಗುಂಡಿಕ್ಕಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆಪರೇಷನ್ ಸಿಂಧೂರ್‌ ಟೀಕಿಸಿರುವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಕೊತ್ತೂರು ಮಂಜುನಾಥ್, ದಿನೇಶ್ ಗುಂಡೂರಾವ್‌ಗೆ ಗುಂಡು ಹೊಡೆಯಬೇಕು. ಇವರಿಗೆಲ್ಲಾ ಗುಂಡು ಹಾಕಿದರೆ ಮಾತ್ರ ಸರಿ ಹೋಗುತ್ತದೆ. ಇವರೆಲ್ಲಾ ದೇಶದ್ರೋಹಿಗಳು, ಇಂತಹ ದೇಶದ್ರೋಹಿಗಳಿಗೆ ಗುಂಡು ಹಾಕಬೇಕು. ಎಷ್ಟು ವಿಮಾನ ಪತನ ಆದವು ಎಂದು ಯುದ್ಧದ ಬಗ್ಗೆ ಸಾಕ್ಷಿ ಕೇಳ್ತಾರೆ ಎಂದು ವಿಜಯಪುರದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.  

ಜೂನಿಯರ್ ಕಾಂಗ್ರೆಸ್ ನಾಯಕರು ಮಾತ್ರ ಟೀಕೆ ಮಾಡುತ್ತಿದ್ದಾರೆ. ಸೀನಿಯರ್ ಖರ್ಗೆ ವಿಧಿ ಇಲ್ಲದೆ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾರೆ. ಆದ್ರೆ ಪಾಕಿಸ್ತಾನ ಪರವಾಗಿ ಮರಿ ಖರ್ಗೆ ಇದ್ದಾರೆ ಎಂದು ದೂರಿದರು.

ಹರಿಪ್ರಸಾದ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಅವರಂತಹ ಕೆಲವರಿಗೆ ಮಾತ್ರ ಎಲ್ಲಿ ಇದ್ದೇವೆ. ಏನು ಮಾಡುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಹೌದೋ, ಅಲ್ವೋ ಎಂದೇ ಗೊತ್ತಾಗುತ್ತಿಲ್ಲ. ಇವರ ಬಗ್ಗೆ ಕಾಂಗ್ರೆಸ್‌ನವರಿಂದಲೇ ಟೀಕೆ ಕೇಳಿಬರುತ್ತಿದೆ ಎಂದರು.  

ಪ್ರೂಫ್ ಕೇಳೋಕೆ ಪ್ರಿಯಾಂಕ್ ಹಾಗೂ ಲಾಡ್ ಯಾರು? ಇವರಿಗೆ ಆಪರೇಷನ್ ಸಿಂಧೂರದ ಬಗ್ಗೆ ಏನು ಪ್ರೂಫ್ ಕೊಡಬೇಕು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲಾ ಪಕ್ಷದ ಸಭೆಗೆ ಹೋಗಿದ್ದಾರೆ. ಅವರನ್ನೇ ಕೇಳಲಿ ಇವರು. ಅವರು ಸಾಕ್ಷಿ ಕೊಟ್ಟೇ ಕೊಡ್ತಾರೆ ಎಂದು ಆಕ್ರೋಶ ಹೊರಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ