ಮೋದಿ ಸರಕಾರದಲ್ಲಿ ದಲಿತರು, ಮುಸ್ಲಿಮರ ಮೇಲೆ ದೌರ್ಜನ್ಯ ಹೆಚ್ಚಳ: ಖರ್ಗೆ

ಶುಕ್ರವಾರ, 29 ಜುಲೈ 2016 (18:06 IST)
ದೇಶಾದ್ಯಂತ ದಲಿತರು, ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹ ಸಚಿವ ರಾಜನಾಥ್ ಸಿಂಗ್ ಮುಂದಾಗಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
 
ಲೋಕಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಬಿಜೆಪಿ ಅಧಿಕಾರವಿರುವ ಮಧ್ಯಪ್ರದೇಶ ಮತ್ತು ಗುಜರಾತ್‌ ರಾಜ್ಯಗಳಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳವಾಗಿವೆ ಎಂದು ಅಂಕಿ ಅಂಶಗಳನ್ನು ಮಂಡಿಸಿದರು.
 
ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಗೋ ರಕ್ಷಣಾ ಸಮಿತಿಗಳನ್ನು ಕೂಡಲೇ ನಿಷೇಧಿಸಬೇಕು.ಇಂತಹ ಸಮಿತಿಗಳಿಗೆ ಬಿಜೆಪಿ ಸರಕಾರಗಳು ಬೆಂಬಲ ಸೂಚಿಸುತ್ತಿವೆ ಎಂದು ಆರೋಪಿಸಿದರು.
 
ದಲಿತರು ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕೈವಾಡವಿದೆ ಎಂದು ಕಿಡಿಕಾರಿದರು.
 
ಸರಕಾರದ ಬೆಂಬಲವಿದ್ದಾಗ ಮಾತ್ರ ಇಂತಹ ಘಟನೆಗಳು ನಡೆಯುತ್ತವೆ. ಕೇವಲ 15 ರೂಪಾಯಿಗಳಿಗಾಗಿ ದಲಿತ ದಂಪತಿಗಳನ್ನು ಹತ್ಯೆ ಮಾಡುವಂತಹ ಕೃತ್ಯಗಳು ದೇಶದಲ್ಲಿ ನಡೆಯುತ್ತಿವೆ. ಆದರೆ, ಮೋದಿ ಸರಕಾರ ಮೌನವಾಗಿ ಕುಳಿತಿದೆ ಎಂದು ಆರೋಪಿಸಿದರು.
 
ವಿಪಕ್ಷಗಳ ನಾಯಕರು ಶೇಮ್ ಶೇಮ್ ಎಂದು ಕೂಗುತ್ತಿರುವ ಮಧ್ಯೆ, ಮಾತನಾಡಿದ ಖರ್ಗೆ, ಇಬ್ಬರು ಮುಸ್ಲಿಂ ಮಹಿಳೆಯರು ದನದ ಮಾಂಸವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ರಸೀದಿ ತೋರಿಸಿದರೂ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಮಧ್ಯಪ್ರದೇಶ ಬಿಜೆಪಿ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ