ಪಾಕ್'ನಲ್ಲಿ ನೋಟು ಬದಲಾವಣೆಯಿಲ್ಲ

ಬುಧವಾರ, 16 ನವೆಂಬರ್ 2016 (10:16 IST)
ಇಸ್ಲಾಮಾಬಾದ್: ಭಾರತದಲ್ಲಿ 500, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ, ಪಾಕಿಸ್ತಾನ ತನ್ನಲ್ಲಿರುವ 5,000 ರೂ. ನೋಟನ್ನು ರದ್ದು ಮಾಡುವುದಾಗಲೀ ಅಥವಾ  40,000 ಪ್ರೈಜ್  ಬಾಂಡ್‍ಗಳನ್ನು  ಹಿಂಪಡೆಯುವುದಾಗಲಿ ಮಾಡುವುದಿಲ್ಲ ಎಂದು ಹೇಳಿದೆ.

ಭಾರತ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿದ ಬೆನ್ನಲ್ಲಿಯೇ ಪಾಕಿಸ್ತಾನ ಕೂಡಾ ತನ್ನಲ್ಲಿ ಚಲಾವಣೆಯಲ್ಲಿರುವ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅದ್ಯಾವ ನಿರ್ಧಾರ ಸದ್ಯ ನಮ್ಮ ಮುಂದೆ ಇಲ್ಲ ಎಂದು ವಿತ್ತ ಸಚಿವ ಇಷಾಕ್ ಧಾರ್ ತಿಳಿಸಿದ್ದಾರೆ.
 
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನ ಗರಿಷ್ಠ ಬೆಲೆಯ ನೋಟು ರದ್ದು ಪಡಿಸುತ್ತದೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ಇಂಥಾ ಯಾವ ಪ್ರಸ್ತಾಪಗಳೂ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.
 
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿಶೇಷ ಸಹಾಯಕ  ಹರೂನ್ ಅಖ್ತರ್ ಖಾನ್, ನೋಟು ರದ್ದು ಮತ್ತು ಪ್ರೈಜ್ ಬಾಂಡ್ ರದ್ದು ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಎರಡು ದಿನದ ಹಿಂದಷ್ಟೇ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದರು.
 
ಈ ಹೇಳಿಕೆಯ ಬೆನ್ನಲ್ಲೇ ಅಂಥಾ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ವಿತ್ತ ಸಚಿವರು ಪ್ರತಿಕ್ರಿಯಿಸಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ