ಇತ್ತ ಸೆರೆಮನೆ ಸೇರಿದ ಶಶಿಕಲಾ, ಅತ್ತ ಸಿಎಂ ಗದ್ದುಗೆಗಾಗಿ ಗದ್ದಲ

ಗುರುವಾರ, 16 ಫೆಬ್ರವರಿ 2017 (08:42 IST)
ತಮಿಳುಮಾಡಿನ ರಾಜಕೀಯ ದಿನದಿನಕ್ಕೂ ಕುತೂಹಲವನ್ನು ಕೆರಳಿಸುತ್ತಿದೆ. ಜಯಲಲಿತಾ ನಿಧನರಾಗುತ್ತಿದ್ದಂತೆ ಸಿಎಂ ಕುರ್ಚಿಗಾಗಿ ಕನಸು ಕಾಣುತ್ತಿದ್ದ ಶಶಿಕಲಾ ನಟರಾಜನ್ ಸುಪ್ರೀಂ ತೀರ್ಪಿನಡಿಯಲ್ಲಿ ಜೈಲು ಸೇರುವಂತಾಗಿದೆ. ಇತ್ತ ಅವರು ಜೈಲು ಸೇರುತ್ತಿದ್ದಂತೆ ಅತ್ತ ಚೆನ್ನೈನಲ್ಲಿ ಪನ್ನೀರ್ ಮತ್ತು ಪಳನಿ ಮುಖ್ಯಮಂತ್ರಿ ಪಟ್ಟಕ್ಕೇರಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

 
ನಿನ್ನೆ ಒಬ್ಬರ ಹಿಂದೊಬ್ಬರಂತೆ ಹಿಂದೊಬ್ಬರು ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿಯಾಗಿದ್ದು ಸರ್ಕಾರ ರಚನೆಗೆ ಹಕ್ಕು ಮಂಡನೆ ಅವಕಾಶ ಕೇಳಿದ್ದಾರೆ. 
 
ಶಶಿಕಲಾ ಆಪ್ತ ಪಳನಿ ಸ್ವಾಮಿ ತಮ್ಮ 10 ಜನ ಬೆಂಬಲಿಗರು ಮತ್ತು ಶಾಸಕರ ಬೆಂಬಲ ಪತ್ರದೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ಕೇಳಿದ್ದಾರೆ. ತಮಗೆ 124 ಶಾಸಕರ ಬೆಂಬಲವಿದೆ ಎಂದಿರುವ ಅವರು ಅದಕ್ಕೆ ಪೂರಕ ದಾಖಲೆಗಳನ್ನು ಸಹ ಒದಗಿಸಿದ್ದಾರೆ.
 
ಇನ್ನು ಪನ್ನೀರ್ ಸೆಲ್ವಂ ಸಹ ರಾಜ್ಯಪಾರನ್ನು ಭೇಟಿಯಾಗಿ ಗಹನವಾದ ಚರ್ಚೆ ನಡೆಸಿದ್ದಾರೆ. ಕೆಲ ಒತ್ತಡದಿಂದಾಗಿ ತಾವು ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆಯನ್ನು ಹಿಂಪಡೆಯಬೇಕೆಂದವರು ಗೋಗರೆದಿದ್ದಾರೆ.
 
ಮತ್ತೀಗ ಚೆಂಡು ರಾಜ್ಯಪಾಲರ ಅಂಗಳದಲ್ಲಿದ್ದು, ಅವರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ತಮಿಳುನಾಡಿಗೆ ತಮಿಳುನಾಡೇ ಕುತೂಹಲದಿಂದ ನೋಡುತ್ತಿದೆ.

ವೆಬ್ದುನಿಯಾವನ್ನು ಓದಿ