ಕೋಲ್ಕತ್ತಾ : ಶಿಕ್ಷಕರ ನೇಮಕಾತಿ ಹಗರಣದ ವಿಚಾರಣೆ ಸಂದರ್ಭ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು, ನನಗೆ ಜಾಮೀನು ಕೊಡಿ, ನನ್ನನ್ನು ಬದುಕಲು ಬಿಡಿ ಎಂದು ನ್ಯಾಯಾಲಯದ ಮುಂದೆ ಕಣ್ಣಿರು ಹಾಕಿದ್ದಾರೆ.
ಬುಧವಾರ ಪಾರ್ಥ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ಪಾರ್ಥ ಚಟರ್ಜಿ 14 ದಿನಗಳ ಬಂಧನದ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಪಾರ್ಥ ಅವರ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದ ಸಂದರ್ಭ ಚಟರ್ಜಿ ತಮ್ಮ ಅಳಲು ತೋಡಿಕೊಂಡು ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಆರೋಪದ ಮೇಲೆ ಪಾರ್ಥ ಚಟರ್ಜಿ ಅವರನ್ನು ಜುಲೈ 23 ರಂದು ಬಂಧಿಸಲಾಗಿತ್ತು. 3 ಸುತ್ತಿನ ಇಡಿ ವಿಚಾರಣೆಯ ಬಳಿಕ ಪ್ರಸ್ತುತ ಅವರನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿದೆ. ವರ್ಚುವಲ್ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ಬಿದ್ಯುತ್ ಕುಮಾರ್ ರಾಯ್, ಪಾರ್ಥ ಅವರು ಬಯಸಿದರೆ ಏನು ಬೇಕಾದರೂ ಹೇಳಬಹುದು ಎಂದು ಹೇಳಿದ್ದಾರೆ.