ಇದೇ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎನ್ ಆರ್ ಸಿ ಯಿಂದಾಗಿ ದೇಶದಲ್ಲಿ ನಾಗರೀಕ ಯುದ್ದದ ಹೇಳಿಕೆಯನ್ನು ನೀಡಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅವರು ನೀಡಿರುವ ಹೇಳಿಕೆ ಬಹಳ ಬೇಜವಾಬ್ದಾರಿತನದ್ದು, ಇದರಿಂದಾಗಿ ಜನರಲ್ಲಿ ಅನಗತ್ಯ ಭಯವನ್ನು ಹುಟ್ಟುಹಾಕುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತದೆ ಎಂದರು. ಅಕ್ರಮ ವಲಸಿಗರಿಂದಾಗಿ ಅಸ್ಸಾಂ ನಲ್ಲಿ ಜನಸಾಂದ್ರತೆಯ ಸಮತೋಲನ ಹಳಿತಪ್ಪಿದ್ದು, ಇದಕ್ಕೆ ಯಾರು ಕಾರಣ ಎಂಬುದು ದೇಶದ ನಾಗರೀಕರಿಗೆ ತಿಳಿದಿದೆ ಎಂದರು.
ಅಸ್ಸಾಂ ಒಪ್ಪಂದದ ಬಗ್ಗೆ ಕೆಲವು ಮಹತ್ವದ ವಿಷಯಗಳನ್ನು ತಿಳಿಸಿದ ಅವರು, 1985 ರಲ್ಲಿ ಅಂದಿನ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಅವರು ಈ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ್ದರು ಅಲ್ಲದೆ, ಇದನ್ನು ಐತಿಹಾಸಿಕ ಎಂದು ಕೆಂಪುಕೋಟೆಯಿಂದ ಘೋಷಣೆಯನ್ನು ಮಾಡಿದ್ದರು. ಈ ಒಪ್ಪಂದದ ಮೂಲ ಉದ್ದೇಶ ಅಸ್ಸಾಂ ರಾಜ್ಯದಿಂದ ಅಕ್ರಮ ವಲಸಿಗರನ್ನು ಹೊರಹಾಕುವುದೇ ಆಗಿತ್ತು. ಶ್ರೀಮತಿ ಇಂದಿರಾ ಗಾಂಧಿ ಅವರೂ ಕೂಡಾ ಬಹಳಷ್ಟು ಸಂಧರ್ಭಗಳಲ್ಲಿ ಈ ಅಕ್ರಮ ವಲಸಿಗರನ್ನು ಹೊರ ಹಾಕುವಂತೆ ಹೇಳಿಕೆಗಳನ್ನು ನೀಡಿದ್ದರು.
ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಮುನ್ನಡೆಸುತ್ತಿರುವ ಕಾಂಗ್ರೆಸ್ ಜೊತೆಗೂಡಿ ಎಲ್ಲಾ ಪ್ರತಿಪಕ್ಷಗಳೂ ಸಂಸತ್ ನಲ್ಲಿ ತಾವು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಸಹಿ ಮಾಡಿದ ಅಸ್ಸಾಂ ಒಪ್ಪಂದದ ವಿರೋಧವಾಗಿದ್ದಾರೋ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕಾಗಿದೆ. ಅಕ್ರಮ ವಲಸಿಗರನ್ನು ಹೊರ ಹಾಕಿ ಎನ್ನುವುದು ಅಸ್ಸಾಂ ನಾಗರೀಕರ ಕಳೆದೊಂದು ದಶಕದ ಹೋರಾಟವಾಗಿದೆ. ರಾಜ್ಯದ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು ತಾವು ದೇಶಭಕ್ತ ಭಾರತೀಯ ನಾಗರೀಕರ ಪರವಾಗಿದ್ದಾರೊ ಅಥವಾ ಅಕ್ರಮ ವಲಸಿಗರೊಂದಿಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದರು.