ನವದೆಹಲಿ: ಆಡಳಿತ ಪಕ್ಷ, ವಿಪಕ್ಷ ಎಂದು ಎಷ್ಟೇ ವಿರೋಧ ಅಭಿಪ್ರಾಯಗಳಿರಲಿ. ಆದರೆ ದೇಶದ ವಿಚಾರಕ್ಕೆ ಬಂದಾಗ ಒಂದಾಗಿರಬೇಕು. ಇದೀಗ ಪೆಹಲ್ಗಾಮ್ ದಾಳಿ ವಿಚಾರದಲ್ಲೂ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಪೆಹಲ್ಗಾಮ್ ನಲ್ಲಿ ನಿನ್ನೆ ಪಾಕ್ ಪ್ರೇರಿತ ಉಗ್ರರು ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 26 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಕೆಲವರು ಕನ್ನಡಿಗರೂ ಸೇರಿದ್ದಾರೆ. ಘಟನೆ ಬಗ್ಗೆ ಈಗ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪೆಹಲ್ಗಾಮ್ ಉಗ್ರರ ದಾಳಿಯನ್ನು ಕ್ಷಮಿಸುವಂತಹದ್ದಲ್ಲ. ಉಗ್ರರನ್ನು ಕೇಂದ್ರ ಸರ್ಕಾರ ಸದೆಬಡಿಯಬೇಕು. ಕೇಂದ್ರಕ್ಕೆ ನಮ್ಮ ಸಂಪೂರ್ಣ ಬೆಂಬಲವಿರಲಿದೆ ಎಂದಿದ್ದಾರೆ.
ಇನ್ನೊಂದೆಡೆ ರಾಹುಲ್ ಗಾಂಧಿ ಕೂಡಾ ಟ್ವೀಟ್ ಮಾಡಿದ್ದು, ಉಗ್ರರ ದಾಳಿಯಲ್ಲಿ ಬಲಿಯಾದ ಪ್ರತಿಯೊಂದು ಕುಟುಂಬದವರಿಗೂ ನ್ಯಾಯ ಸಿಗಬೇಕು. ನಮ್ಮ ಸಂಪೂರ್ಣ ಬೆಂಬಲ ನಿಮಗಿದೆ ಎಂದು ಕೇಂದ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಗೃಹಸಚಿವ ಅಮಿತ್ ಶಾ ಕಾಶ್ಮೀರದಲ್ಲೇ ಬೀಡುಬಿಟ್ಟಿದ್ದು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಲೇ ಇದ್ದಾರೆ.