ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6,000 ರೂ. ಸಿಗುತ್ತಿದೆ. ಆದರೆ ಇನ್ನು ಮುಂದೆ ಈ ಹಣ ನಿಮ್ಮ ಖಾತೆಗೆ ಬರಬೇಕಾದರೆ ಈ ಒಂದು ಕೆಲಸ ಮಾಡಲೇಬೇಕು.
ಇನ್ನು ಮುಂದೆ ಈ ಯೋಜನೆಯಡಿ ಹಣ ಪಡೆಯಲು ರೈತ ಗುರುತಿನ ಚೀಟಿ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ ಇಂತಹದ್ದೊಂದು ಹೊಸ ನಿಯಮ ಜಾರಿಗೆ ತಂದಿದೆ. ಸದ್ಯಕ್ಕೆ ಇದು ಕೆಲವೇ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿದ್ದು, ಮುಂದೆ ಕರ್ನಾಟಕದಲ್ಲೂ ಈ ನಿಯಮ ಕಡ್ಡಾಯವಾಗಲಿದೆ.
ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶದ ಪ್ರಕಾರ, ರೈತರ ಗುರುತಿನ ಚೀಟಿಯು ಅರ್ಜಿದಾರ ಕೃಷಿ ಭೂಮಿ ಹೊಂದಿರುವುದನ್ನು ದೃಢಪಡಿಸುವುದು ಕಾರಣ, ನೋಂದಣಿ ಪ್ರಕ್ರಿಯೆಯೂ ಸುಲಭವಾಗುತ್ತದೆ. ಹೀಗಾಗಿ ಎಲ್ಲಾ ಹೊಸ ಅರ್ಜಿದಾರರೂ ಫಾರ್ಮರ್ಸ್ ರಿಜಿಸ್ಟ್ರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.
ಸದ್ಯಕ್ಕೆ ಇದನ್ನು 10 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಸದ್ಯಕ್ಕೆ ಇದು ಕರ್ನಾಟಕದಲ್ಲಿ ಕಡ್ಡಾಯವಲ್ಲ. ಆದರೆ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಇದು ಕಡ್ಡಾಯವಾಗಲಿದೆ. ಹೀಗಾಗಿ ಈ ಕೆಲಸ ಇಂದೇ ಮಾಡಿದರೆ ಉತ್ತಮ.
ರೈತ ಗುರುತಿನ ಚೀಟಿ ಎಂದರೇನು
ಕಿಸಾನ್ ಪೆಹಚಾನ್ ಕಾರ್ಡ್ ಅಥವಾ ರೈತ ಗುರುತಿನ ಚೀಟಿ ಎಂದರೆ ರಾಜ್ಯಗಳ ಭೂ ದಾಖಲೆಗಳೊಂದಿಗೆ ಲಿಂಕ್ ಆಗಿರುವ ಆಧಾರ್ ರೀತಿಯ ಡಿಜಿಟಲ್ ಕಾರ್ಡ್ ಆಗಿದೆ. ಇದರಲ್ಲಿ ರೈತನ ಭೂಮಿ ಸೇರಿದಂತೆ ಎಲ್ಲಾ ಮಾಹಿತಿಗಳೂ ಇರುತ್ತವೆ.