ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 8 ರಿಂದ 10ರವರೆಗೆ ರಷ್ಯಾ ಹಾಗೂ ಆಸ್ಟ್ರಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
22ನೇ ಭಾರತ- ರಷ್ಯಾ ವಾರ್ಷಿಕ ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜುಲೈ 8 ರಿಂದ 9ರವರೆಗೆ ರಷ್ಯಾಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
5 ವರ್ಷಗಳ ನಂತರ ಮೋದಿಯವರ ಮೊದಲ ರಷ್ಯಾ ಪ್ರವಾಸ ಇದಾಗಿದೆ. 2019ರಲ್ಲಿ ಅವರು ಇಲ್ಲಿನ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿದ್ದರು.
ರಷ್ಯಾ ಪ್ರವಾಸ ಮುಗಿಸಿದ ನಂತರ, ಮೋದಿ ಅವರು ಆಸ್ಟ್ರಿಯಾಕ್ಕೆ ಪ್ರಯಾಣಿಸಲಿದ್ದಾರೆ. 41 ವರ್ಷಗಳ ಬಳಿಕ ಆ ದೇಶ (ಆಸ್ಟ್ರಿಯಾ)ಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿ ಇದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.