ಧರಂ ಸಿಂಗ್ ನಿಧನ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕಂಬನಿ

ಗುರುವಾರ, 27 ಜುಲೈ 2017 (14:41 IST)
ನವದೆಹಲಿ/ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಧರಂ ಸಿಂಗ್ ಅವರ ಸಾವಿನ ದುಃಖವನ್ನು ತಡೆಯುವ ಶಕ್ತಿ ಅವರ ಕುಟುಂಬಕ್ಕೆ ದೇವರ  ಕರುಣಿಸಲಿ ಎಂದು ಮೋದಿ ಹೇಳಿದ್ದಾರೆ.
 
ಟ್ವಿಟರ್ ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಮಾಜಿ ಸಿಎಂ ಧರಂ ಸಿಂಗ್ ಅವರ ನಿಧನದ ವಾರ್ತೆ ಕೇಳಿ ನಿಜಕ್ಕೂ ಆಘಾತವಾಯಿತು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರ ಜತೆ ನಾವಿದ್ದೇವೆ. ಅವರ ಸಾವು ನೋವು ತಂದಿದ್ದು, ಅವರ ಕುಟುಂಬಕ್ಕೆ ನೋವು  ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ. ಧರಂ ಸಿಂಗ್ ಅವರು ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದವರಾಗಿದ್ದರು. ರಾಷ್ಟ್ರ ರಾಜಕಾರಣದಲ್ಲೂ  ಸಾಕಷ್ಟು ಅನುಭವ ಹೊಂದಿದ್ದರು. ಸಮಾಜಕ್ಕೆ ಅವರು ನೀಡಿದ್ದ ಕೊಡುಗೆಗಳು ಶಾಶ್ವತವಾಗಿ ನೆನಪಿನಲ್ಲಿರುವತ್ತವೆ ಎಂದು ತಿಳಿಸಿದ್ದಾರೆ.
 
ಇನ್ನು ಧರಂ ಸಿಂಗ್ ಸಾವಿನ ಹಿನ್ನಲೆಯಲ್ಲಿ ಸಂತಾಪ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಧರಂ ಸಿಂಗ್ ಸಾವು ತೀವ್ರ‌ ನೋವು ತಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ 20 ತಿಂಗಳು ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ