2018ರ ವೇಳೆಗೆ ಪ್ರತಿ ಮನೆಯೂ ಪ್ರಜ್ವಲಿಸಲಿದೆ: ಪ್ರಧಾನಿ ಮೋದಿ
ಮಂಗಳವಾರ, 26 ಸೆಪ್ಟಂಬರ್ 2017 (08:18 IST)
ನವದೆಹಲಿ: ದೇಶದ ಪ್ರತಿ ಮನೆಗೂ ವಿದ್ಯುತ್ ಭಾಗ್ಯ ಕಲ್ಪಿಸುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸೌಭಾಗ್ಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ದೀನ ದಯಾಳ್ ಉರ್ಜ ಭವನದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಗೆ 16 ಸಾವಿರ ಕೋಟಿ ವೆಚ್ಚವಾಗಲಿದೆ. 18 ಸಾವಿರ ಹಳ್ಳಿಗಳಿಗೆ ಒಂದು ಸಾವಿರ ದಿನದಲ್ಲಿ ವಿದ್ಯುತ್ ನೀಡಲು ಸರ್ಕಾರ ಗುರಿಹೊಂದಿದೆ. ಈ ಪೈಕಿ 3 ಸಾವಿರ ಹಳ್ಳಿಗಳು ಮಾತ್ರ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಆ ಹಳ್ಳಿಗಳನ್ನೂ ವಿದ್ಯುನ್ಮಾನಗೊಳಿಸಲಾಗುವುದು. ಸೌಭಾಗ್ಯ ಯೋಜನೆಯು ಸರ್ಕಾರದ ಮೂರು ವರ್ಷದ ಸಂಕೇತವಾಗಿದೆ ಎಂದರು.
ಉಜಾಲಾ ಯೋಜನೆಯಡಿ 26 ಕೋಟಿಗೂ ಹೆಚ್ಚು ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದ್ದು, ಪ್ರತಿ ವರ್ಷ 13,700 ಕೋಟಿ ರೂ. ಉಳಿತಾಯವಾಗುತ್ತಿದೆ. ಕಳೆದ ವರ್ಷ ನಾಸಾ ತೆಗೆದ ಫೋಟೊದಲ್ಲಿ ಭಾರತ ವಿದ್ಯುತ್ ದೀಪಗಳಿಂದ ಪ್ರಜ್ವಲಿಸುತ್ತಿತ್ತು. 2012ರಲ್ಲೂ ಇದೇ ಫೋಟೊ ತೆಗೆದಿತ್ತು ಆದರೆ ಸಂಪೂರ್ಣ ಕತ್ತಲು ಆವರಿಸಿತ್ತು ಎಂದರು.
ಈಯೋಜನೆಯಡಿ ಬಡವರು ಸೀಮೆಎಣ್ಣೆ ಬದಲು ಗ್ಯಾಸ್ ಪಡೆಯಲಿದ್ದಾರೆ. ಪ್ರತಿ ಮನೆಗೆ 5 ಎಲ್ಇಡಿ ಬಲ್ಬ್ ಹಾಗೂ ಫ್ಯಾನ್ ಸಿಗಲಿದೆ. ಇದಲ್ಲದೆ ಆರೋಗ್ಯ ಸೇವೆ, ಶಿಕ್ಷಣ, ಸಾರ್ವಜನಿಕ ರಕ್ಷಣೆ ಮತ್ತು ಸಂವಹನ ಕ್ಷೇತ್ರದ ಅಭಿವೃದ್ಧಿಗೆ ಈ ಯೋಜನೆ ಸಹಾಯವಾಗಲಿದೆ ಎಂದರು.